ಪಂ.ಭೀಮಸೇನ ಮಾಧವ ಸಂಗೀತೋತ್ಸವ ಸಮಾರೋಪ ಸಮಾರಂಭ

ಪಂ.ಭೀಮಸೇನ ಮಾಧವ ಸಂಗೀತೋತ್ಸವ ಸಮಾರೋಪ ಸಮಾರಂಭ Closing ceremony of Pm. Bhimasena Madhava Music Festival

ಲೋಕದರ್ಶನ ವರದಿ 

ಧಾರವಾಡ 26 : ಗುರು-ಶಿಷ್ಯರು ಹೇಗಿರಬೇಕೆಂಬುದಕ್ಕೆ ಪಂ.ಭೀಮಸೇನ ಜೋಶಿ ಮತ್ತು ಪಂ.ಮಾಧವ ಗುಡಿಯವರೇ ಮಾದರಿಯಾಗಿದ್ದಾರೆ. ಪಂ.ಮಾಧವ ಗುಡಿಯವರಿಗೆ ತಮ್ಮ ಲೌಖಿಕ ಬದುಕಿಗಿಂತ ಸಂಗೀತವೇ ಜೀವನವಾಗಿದ್ದಿತು ಎಂದು ಉಚ್ಛನ್ಯಾಯಾಲಯದ ಖ್ಯಾತ ನ್ಯಾಯವಾದಿ ಡಾ. ಉದಯ ದೇಸಾಯಿ ಹೇಳಿದರು.  ದಿನಾಂಕ: 25.04.2026ರಂದು ಸಂಜೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕಿರಣಾ ಸಂಗೀತ ಅಕಾಡೆಮಿ ಹಾಗೂ ಪದ್ಮಶ್ರೀ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಏರಿ​‍್ಡಸಿದ್ದ ಪಂ.ಭೀಮಸೇನ ಮಾಧವ ಸಂಗೀತೋತ್ಸವ ಹಾಗೂ ಸ್ವರನಿಧಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನದ ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಉದಯ ದೇಸಾಯಿ ಮಾತನಾಡುತ್ತ ಪಂ.ಮಾಧವ ಗುಡಿಯವರಂಥ ಶ್ರೇಷ್ಠ ಗಾಯಕರು ಧಾರವಾಡದಲ್ಲಿದ್ದರು ಎನ್ನುವುದೇ ಹೆಮ್ಮೆಯ ಸಂಗತಿಯಾಗಿದೆ.   ಪ್ರತಿಯೊಂದು ಕಿರಣಾ ಘರಾಣೆಯ ಗಾಯಕರ ಮನೆಗಳಲ್ಲಿ ಇಡೀ ಅವರ ಪರಿವಾರದವರೆಲ್ಲರೂ ಸಂಗೀತಗಾರರಾಗಿರುತ್ತಾರೆ ಎಂದರು.    

ಮುಖ್ಯ ಅತಿಥಿಗಳಾಗಿದ್ದ ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಮಾತನಾಡುತ್ತ ಪಂ. ಮಾಧವ ಗುಡಿಯವರು ಸುಮಾರು 27 ವರ್ಷಗಳ ಕಾಲ ಪಂ.ಭೀಮಸೇನ ಜೋಶಿ ಅವರೊಂದಿಗಿದ್ದು ಸಂಗೀತ ಸಿದ್ಧಿಸಿಕೊಂಡಿರುವುದು ಸಾಮಾನ್ಯವಾದುದಲ್ಲ.  ಅಂತಹ ಶ್ರೇಷ್ಠ ಸಂಗೀತವನ್ನು ಅವರ ಮಕ್ಕಳು ಪರಂಪರೆಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.      

ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಮಾತನಾಡುತ್ತ ಪಂ. ಮಾಧವ ಗುಡಿ ಅವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ವಿಶಿಷ್ಠ ಕೊಡುಗೆಯನ್ನು ಕೊಟ್ಟಿದ್ದಾರೆ ಅವರ ಸ್ಮರಣೆಯಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಸಂಗೀತೋತ್ಸವವನ್ನು ಏರಿ​‍್ಡಸುತ್ತ ಬಂದಿರುವುದು ಸ್ತೂತ್ಯವಾದುದು. ಪಂ.ಮಾಧವ ಗುಡಿ ಅವರು ರಚಿಸಿದ ವಿಶಿಷ್ಠ ಬಂಧೀಶ್ ಮತ್ತು ಚೀಜುಗಳ ಗಾಯನ ತರಬೇತಿ ಶಿಬಿರಗಳನ್ನು ನಿರಂತರವಾಗಿ ಪದ್ಮಶ್ರೀ ಸಂಗೀತ ಪ್ರತಿಷ್ಠಾನದ ಭಾರ್ಗವಿ ಕುಲಕರ್ಣಿಯವರು ಆಯೋಜಿಸುತ್ತ ಬಂದಿರುವುದು ಶ್ಲಾಘನೀಯವಾದುದು ಎಂದರು.      

ಪಂ.ರಾಘವೇಂದ್ರ ಗುಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಬೆಂಗಳೂರಿನ ಕೃಷ್ಣ ಪುರೋಹಿತ, ಹಂಚಿನಮನಿ ಪಿ.ಯು. ಕಾಲೇಜಿನ ಮುಖ್ಯಸ್ಥರಾದ ವರ್ಷಾ ಹಂಚಿನಮನಿ, ವಿದುಷಿ ಭಾರ್ಗವಿ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.   ಇದೇ ಸಂದರ್ಭದಲ್ಲಿ ಸ್ವರನಿಧಿ ರಾಷ್ಟ್ರೀಯ ಪ್ರಶಸ್ತಿಯನ್ನು ಗದಗಿನ ಹಿರಿಯ ಹಿಂದೂಸ್ಥಾನಿ ಗಾಯಕ ಪಂ.ಅರವಿಂದ ಹುಯಿಲಗೋಳ ಅವರಿಗೆ ಪ್ರದಾನ ಮಾಡಲಾಯಿತು.  ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.    

ವಿದುಷಿ ಭಾರ್ಗವಿ ಕುಲಕರ್ಣಿ ಅವರು ಗಾಯನದಲ್ಲಿ ರಾಗ ಯಮನ್ ಮತ್ತು ದಾಸವಾಣಿ, ಪ್ರಶಸ್ತಿ ಪುರಸ್ಕೃತ ಪಂ.ಅರವಿಂದ ಹುಯಿಲಗೋಳ ಅವರು ಹಿಂದೂಸ್ಥಾನಿ ಗಾಯನದಲ್ಲಿ ರಾಗ ಮಾರುಬಿಹಾಗ್ ಮತ್ತು ದಾಸವಾಣಿ, ವಿದುಷಿ ಅನುಪಮಾ ಮಂಗಳವೇಡೆ ಅವರು ಹಿಂದೂಸ್ಥಾನಿ ಗಾಯನದಲ್ಲಿ ರಾಗ ದುರ್ಗಾ ಮತ್ತು ಮರಾಠೀ ಅಭಂಗಗಳನ್ನು, ಪಂ.ಪ್ರಸನ್ ಗುಡಿಯವರು ಗಾಯನದಲ್ಲಿ ರಾಗ ಪೂರಿಯಾ ಕಲ್ಯಾಣ, ಪಂ. ರಾಘವೇಂದ್ರ ಗುಡಿಯವರು ಗಾಯನದಲ್ಲಿ ರಾಗ ಜೈಜಯವಂತಿ ಹಾಗೂ ಭೈರವಿ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಮಳೆಮಲ್ಲೇಶ ಹೂಗಾರ, ರಘುನಂದನ ಹೂಗಾರ, ಹಾರ್ಮೋನಿಯಂದಲ್ಲಿ ಪ್ರಕಾಶ ಹೆಗಡೆ,  ಗಾಯತ್ರಿ ಥಿಟೆ, ಕಿರಣ ಆಯಾಚ್ಚಿತ್ ಸಾಥ್ ಸಂಗತ್ ನೀಡಿದರು.  ತಾಳದಲ್ಲಿ ಸಮರ್ಥ ಪಾಟೀಲ, ಅಮಿತ ಕಳಸಾಪೂರ ಸಹಕಾರ ನೀಡಿದರು.   

ರವಿ ಕುಲಕರ್ಣಿ ನಿರೂಪಿಸಿದರು, ವಿದುಷಿ ಅನುಪಮಾ ಮಂಗಳವೇಡೆ ಸ್ವಾಗತಿಸಿದರು, ವಿಜಯೇಂದ್ರ ಅರ್ಚಕ ವಂದಿಸಿದರು.  ಕಾರ್ಯಕ್ರಮದಲ್ಲಿ ಗಣ್ಯರಾದ ಡಾ. ಸುಮಿತ್ರಾ ಕಾಡದೇವರಮಠ, ಎನ್‌.ಜಿ.ಗಲಗಲಿ, ಮಲ್ಲಿಕಾರ್ಜುನ ಚಿಕ್ಕಮಠ, ಪಂ.ಶೇಷಗಿರಿ ಗುಡಿ, ಪಂ.ಸಾತಲಿಂಗಪ್ಪ ಹೂಗಾರ ಕಲ್ಲೂರ ದೇಸಾಯಿ, ವಿದುಷಿ ಸುಜಾತಾ ಗುರವ, ಪಂ.ಪ್ರಸನ್ ಗುಡಿ ಮುಂತಾದವರು ಉಪಸ್ಥಿತರಿದ್ದರು.