ಸ್ಪಷ್ಟ ಗುರಿ ಮತ್ತು ಶಿಸ್ತು ಯಶಸ್ಸಿನ ಮೂಲ: ಡಾ. ಸಿ.ಎಂ. ತ್ಯಾಗರಾಜ್

ಸ್ಪಷ್ಟ ಗುರಿ ಮತ್ತು ಶಿಸ್ತು ಯಶಸ್ಸಿನ ಮೂಲ: ಡಾ. ಸಿ.ಎಂ. ತ್ಯಾಗರಾಜ್  Clear goals and discipline are the foundation of success: Dr. C.M. Tyagaraj

ಲೋಕದರ್ಶನ ವರದಿ 

ಮಾಂಜರಿ, ಆ.7: ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಎಂ. ತ್ಯಾಗರಾಜ್ ಹೇಳಿದರು.  

ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಕೆ.ಎಲ್‌.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 2026ಹಿ27್ಫೂ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.  

ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಮೂಲಮಂತ್ರವಾಗಿದ್ದು, ಪಠ್ಯದ ಜೊತೆಗೆ ಕ್ರೀಡೆ, ಸಂಘ ಹಾಗೂ ವಿವಿಧ ಕ್ಲಬ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಸುರೇಶ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪೋಷಕರಿಗೆ ಗೌರವ ನೀಡಬೇಕು, ಗುರುಗಳನ್ನು ಆದರಿಸಬೇಕು, ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ಎಸ್‌. ಕಾನಡೆ, ಪಿ.ಎನ್‌. ತಳವಾರ, ಸಂತೋಷ ಹಿರೇಮಠ, ಜ್ಯೋತಿ ತಮಗೌಡ, ಮಹುವಾ ನಿಯೋಗಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.