ರಕ್ತದಾನ ಶಿಬಿರಕ್ಕೆ ಚಾಲನೆ: ರಕ್ತದಾನ ಅತ್ಯುನ್ನತ ಮಾನವೀಯ ಸೇವೆ- ಜಿಲ್ಲಾಧಿಕಾರಿ

ರಕ್ತದಾನ ಶಿಬಿರಕ್ಕೆ ಚಾಲನೆ: ರಕ್ತದಾನ ಅತ್ಯುನ್ನತ ಮಾನವೀಯ ಸೇವೆ- ಜಿಲ್ಲಾಧಿಕಾರಿ Blood donation camp inaugurated: Blood donation is the highest form of humanitarian service – Deputy

ಲೋಕದರ್ಶನ ವರದಿ 

ಬಳ್ಳಾರಿ 07: ರಕ್ತದಾನವು ಅತ್ಯುನ್ನತ ಮಾನವೀಯ ಸೇವೆಯಾಗಿದ್ದು, ಒಂದು ಯೂನಿಟ್ ರಕ್ತದಿಂದ ಜೀವ ಉಳಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜೆಎಸ್‌ಡಬ್ಲ್ಯೂ ತೋರಣಗಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಒಪಿಜೆ ಸೆಂಟರ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಕ್ತ ಮಿತ್ರ 2.0’ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ಕೈಗಾರಿಕಾ ಕ್ಷೇತ್ರದ ಜೊತೆಗೆ ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಇತರೆ ಸಂಸ್ಥೆಗಳು ಕೊಡುಗೆ ನೀಡಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ರಕ್ತದ ಕೊರತೆಯಿಂದ ಅಮೂಲ್ಯ ಜೀವಗಳು ಅಪಾಯಕ್ಕೀಡಾಗಬಾರದು. ವಿಶೇಷವಾಗಿ ಅಪರೂಪದ ರಕ್ತ ಗುಂಪಿನ ದಾನಿಗಳು ಅಗತ್ಯ ಬಿದ್ದಾಗ ಜಿಲ್ಲಾ ಆಸ್ಪತ್ರೆ ಹಾಗೂ ಬಿಎಂಸಿ ಆರ್‌ಸಿಗೆ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಮಾತನಾಡಿ, ವೈದ್ಯರಷ್ಟೇ ಅಲ್ಲದೆ, ರಕ್ತ ನೀಡುವ ದಾನಿಗಳೂ ಸಹ ಜೀವ ಉಳಿಸುವ ನಿಜವಾದ ಜೀವದಾತರು. ಪ್ರತಿಯೊಬ್ಬ ನಾಗರಿಕನೂ ಸ್ವಯಂಪ್ರೇರಿತನಾಗಿ ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವಂತೆ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ ಎಂದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ. 1 ರಷ್ಟು ರಕ್ತದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಈಗಾಗಲೇ 243 ರಕ್ತದಾನ ಶಿಬಿರಗಳನ್ನು ಆಯೋಜಿಸಿ 14,034 ರಕ್ತಚೀಲಗಳನ್ನು ಸಂಗ್ರಹಿಸಲಾಗಿದ್ದು, ಒಟ್ಟಾರೆಯಾಗಿ 31,741 ರಕ್ತಚೀಲಗಳನ್ನು ಸಂಗ್ರಹಿಸಿ ನಿಗದಿತ ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು. 

ಜೆಎಸ್‌ಡಬ್ಲ್ಯೂ ಆವರಣದ 20 ವಿಭಿನ್ನ ಸ್ಥಳಗಳಲ್ಲಿ ಈ ಶಿಬಿರ ನಡೆದಿದ್ದು, ಜಿಲ್ಲೆಯ 9 ರಕ್ತ ಕೇಂದ್ರಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಶುಕ್ರವಾರ ಸಂಜೆ ವೇಳೆಗೆ 2,000ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದ್ದು, ಒಟ್ಟು 3,000 ರಕ್ತಚೀಲಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 3 ದಿನಗಳಲ್ಲಿ 5,024 ರಕ್ತಚೀಲಗಳನ್ನು ಸಂಗ್ರಹಿಸಲಾಗಿತ್ತು. ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ. ಅಬ್ದುಲ್ಲಾ, ಸಂಡೂರು ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್, ಜೆಎಸ್‌ಡಬ್ಲ್ಯೂ ಸಂಸ್ಥೆಯ ಸಿಇಒ ಎಲ್‌.ಆರ್‌. ಸಿಂಗ್, ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮಯೂಶ್ ಬಾಪಾಟ್, ವೈಸ್ ಪ್ರೆಸಿಡೆಂಟ್ ಸುನಿಲ್ ರಲ್ಪೆ ಹಾಗೂ ರಿತೇಶ್ ಸಿನ್ಹಾ, ಸೌತ್ ರೀಜನಲ್ ಹೆಡ್ ಪೆದ್ದಣ್ಣ ಬೀಡಾಲ್ ಹಾಗೂ ಭಾರತಿ ಪಳಿನಿಸ್ವಾಮಿ ಸೇರಿದಂತೆ ಜೆಎಸ್‌ಡಬ್ಲ್ಯೂ ಫೌಂಡೇಶನ್ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ನಸಿಂರ್ಗ್ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.