ಬೆಳಗಾವಿ 06: ಸ್ವಚ್ಛತೆಯು ಆರೋಗ್ಯಯುತ ಜೀವನದ ಸೂತ್ರ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವೈದ್ಯ ಡಾ. ಬಸವರಾಜ ಕುಡಸೋಮಣ್ಣವರ ಹೇಳಿದರು.
ಅವರು ನಿನ್ನೆ ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಗ್ರಾಮ ಪಂಚಾಯತ ತಾರಿಹಾಳ ಹಾಗೂ ಜನ ಸೇವಾ ಪೌಂಡೇಶನ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮಗಳು ದೇಶದ ಬೆನ್ನುಲುಬು ಇದ್ದ ಹಾಗೆ ಗ್ರಾಮೀನ ಜನರು ಆರೋಗ್ಯವಾಗಿದ್ದರೆ ದೇಶವೇ ಆರೋಗ್ಯವಾಗಿದ್ದಂತೆ. ಸ್ವಚ್ಛ ಸುಂದರ ಪರಿಸರವನ್ನು ಮೈಗೂಡಿಸಿಕೊಂಡರೆ ಆರೋಗ್ಯಯುತ ಜೀವನ ನಡೆಸಬಹುದಾಗಿದೆ. ಶೌಚವನ್ನು ಉಪಯೋಗಿಸಿದ ನಂತರ ಸ್ವಚ್ಛವಾಗಿ ಕೈತೊಳೆಯದೇ ಇರುವುದು, ಬರಿಗಾಲಿನಿಂದ ಮೈದಾನದಲ್ಲಿ ಅಡ್ಡಾಡುವದು, ನಿಯಮಿತವಾಗಿ ಉಗುರುಗಳನ್ನು ಕತ್ತರಿಸದೇ ಇರುವುದು ಹೀಗೆ ಹಲವಾರು ವಿಷಯಗಳು ಸಾಮಾನ್ಯವಾಗಿ ಕಂಡರೂ ಇವುಗಳನ್ನು ಕಡೆಗಣಿಸಿದರೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಇವುಗಳ ಬಗ್ಗೆ ಇಂದೇ ಕಾಳಜಿವಹಿಸಿ ಎಂದು ತಿಳುವಳಿಕೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ನಾಮದೇವ ಜೋಗಣ್ಣವರ ಅವರು ಮಾತನಾಡುತ್ತ ಆರೋಗ್ಯವೇ ಭಾಗ್ಯ, ಕೆ ಎಲ್ ಇ ಸಂಸ್ಥೆಯು ಇಂದು ನಮ್ಮ ಮನೆ ಮನೆಗೆ ಆರೋಗ್ಯ ಸೇವೆಗಳನ್ನು ನೀಡುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಯುವ ವೈದ್ಯ ಡಾ. ರಿಕಿ ಪಾಟೀಲ ಅವರು, ಚಿಕ್ಕಮಕ್ಕಳ ವೈದ್ಯ ಡಾ.ಬಸವರಾಜ ಕುಡಸೋಮಣ್ಣವರ, ಕಣ್ಣು ವಿಭಾಗದ ವೈದ್ಯೆ ಡಾ. ಸ್ಪೂರ್ತಿ ಮೊರಫ್ಫನವರ, ಎಲುಬು ಕೀಲು ವೈದ್ಯ ಡಾ. ಕ್ರಿಶ್, ಜನಸಂಪರ್ಕಾಧಿಕಾರಿ ಗೀರೀಶ ಇಟಗಿ, ಸಂತೋಷ ಇತಾಪೆ ಮತ್ತು ತಂಡದವರು, ತಾರಿಹಾಳ ಗ್ರಾಮ ಪಂಚಾಯತ ಸದಸ್ಯರು, ಜನ ಸೇವಾ ಫೌಂಡೇುಷನ್‌ನ ಪದಾಧಿಕಾರಿಗಳು ಮತ್ತು ತಾರಿಹಾಳ ಗ್ರಾಮದ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಿ ಓಷಧ ವಿತರಿಸಿದರು.
ಶಿಬಿರದಲ್ಲಿ 206 ನಾಗರಿಕರನ್ನು ತಪಾಶಿಸಲಾಯಿತು. ಅದರಲ್ಲಿ 85 ಜನರಿಗೆ ಮೆಡಿಸಿನ ವಿಭಾಗದ ವೈದ್ಯರು ತಪಾಸಣೆ ಮಾಡಿ 15 ಜನರಿಗೆ ಅತಿರಕ್ತದೊತ್ತಡ, 8 ಜನರಿಗೆ ಮಧುಮೇಹದ ಸಮಸ್ಯೆ, 45 ಜನರಿಗೆ ಎಲುಬು ಕೀಲು ವೈದ್ಯರಿಂದ ತಪಾಸಣೆ ಮಾಡಲಾಗಿ ಅದರಲ್ಲಿ 08 ಜನರಿಗೆ ಸಂಧಿವಾತ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. 65 ಜನರಿಗೆ ಕಣ್ಣಿನ ವೈದ್ಯರು ತಪಾಸಣೆ ಮಾಡಲಾಗಿ ಅದರಲ್ಲಿ 33 ಜನರಿಗೆ ಮೋತಿಬಿಂದು ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. ಚಿಕ್ಕಮಕ್ಕಳ ವೈದ್ಯರು 48 ಮಕ್ಕಳನ್ನು ತಪಾಸಣೆ ಮಾಡಿದರು. ಅದರಲ್ಲಿ 4 ಮಕ್ಕಳಿಗೆ ಅಪೌಷ್ಟಿಕತೆ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. ಈ ಎಲ್ಲ ನಾಗರಿಕರಿಗೆ ಆಸ್ಪತ್ರೆಯ ಅತ್ಯಲ್ಪದರದ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಆಸ್ಪತ್ರೆಯ ನಿರ್ದೇಶಕ ಡಾ.ಎಸ್ ಸಿ ಧಾರವಾಡ ಅವರು ಸೂಚಿಸಿದ್ದಾರೆ.