ಸ್ವಚ್ಛತೆ ಕಾಪಾಡಲು ನಾಗರಿಕರ ಸಹಕಾರ, ಸಲಹೆ ಅಗತ್ಯ

ಧಾರವಾಡ 16: ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯ ಆರಂಭಿಸಿರುವ ಸ್ವಚ್ಛ ಸರ್ವೇ ಕ್ಷಣ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಹಿ ಅಭಿಯಾನ ಮತ್ತು ಸೆಲ್ಫಿ ಪಾಯಂಟ್ಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಮಧ್ಯಾಹ್ನ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಪ್ರತಿಯೊಬ್ಬ ನಾಗರಿಕರ ಸಹಕಾರ, ಸಲಹೆ ಅಗತ್ಯವಾಗಿದೆ. ಪಾಲಿಕೆಯಿಂದ ಪ್ರತಿ ವಾರ್ಡ್ ಳಲ್ಲಿ ನಿಯಮಿತವಾಗಿ ಸ್ಚಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಸಾರ್ವಜನಿಕರು ಸ್ವಚ್ಛ ಸರ್ವೇ ಕ್ಷಣ ಅಭಿಯಾನದಲ್ಲಿ ಭಾಗವಹಿಸಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ, ದೂರುಗಳನ್ನು ಸ್ವಚ್ಛತಾ ಆ್ಯಪ್ ಬಳಸುವ ಮೂಲಕ ದಾಖಲಿಸಬಹುದು. ಸ್ವಚ್ಛತೆಯ ಬಗ್ಗೆ ಸಲಹೆಗಳು, ಅಭಿಪ್ರಾಯಗಳನ್ನು ಆ್ಯಪ್ ಮೂಲಕ ತಿಳಿಸಬಹುದು ಎಂದು ಹೇಳಿದರು. 

ಜಿ.ಪಂ ಸಿಇಓ ಡಾ.ಬಿ.ಸಿ. ಸತೀಶ ಮಾತನಾಡಿ, ಮಹಾನಗರವನ್ನು ಸ್ವಚ್ಛ ಮತ್ತು ಹಸಿರುಯುಕ್ತ ಸುಂದರ ನಗರವನ್ನಾಗಿ  ರೂಪಿಸಲು ಸ್ವಚ್ಛ ಸರ್ವೇ ಕ್ಷಣ ಅಭಿಯಾನದಲ್ಲಿ ಸ್ವಚ್ಛತಾ ಆ್ಯಪ್ ಬಳಸುವ ಮೂಲಕ ಸಕ್ರಿಯವಾಗಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು. 

ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಸ್ವಚ್ಛ ಸರ್ವೇ ಕ್ಷಣ ಅಭಿಯಾನದಲ್ಲಿ ಅವಳಿ ನಗರದ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಗೂಗಲ್ ಪ್ಲೇಸ್ಟೋರ ಆ್ಯಪ್ದಿಂದ ಸ್ವಚ್ಚತಾಆ್ಯಪ್ ಡೌನ್ಲೋಡ್ ಮಾಡಿಕೊಂಡು ನೇರವಾಗಿ ತಮ್ಮ ಸ್ಥಳದಲ್ಲಿನ ಸ್ವಚ್ಚತೆ, ನೈರ್ಮಲ್ಯ ಕುರಿತು ದೂರು ಸಲಹೆಗಳನ್ನು ಸಲ್ಲಿಸಬಹುದು.

ನಾಗರಿಕರು ಉತ್ತಮ ಅಭಿಪ್ರಾಯ ದಾಖಲಿಸಿದಲ್ಲಿ ಮಹಾನಗರಕ್ಕೆ ಸ್ವಚ್ಛ ಸರ್ವೇ ಕ್ಷಣದಲ್ಲಿ ಉತ್ತಮ ರ್ಯಾಂಕ್ ಬರುತ್ತದೆ. ಇದರಿಂದಾಗಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಸ್ವಚ್ಛ ಸರ್ವೇ ಕ್ಷಣ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಲು ಸ್ವಚ್ಛ ಸರ್ವೇ ಕ್ಷಣಸೆಲ್ಪಿ ಪಾಯಿಂಟ್ಗೆ ಆ್ಯಪ್ ಡೌನ್ಲೋಡ್ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜಿಲ್ಲಾಧಿಕಾರಿಗಳ ದೀಪಾ ಚೋಳನ್ ಹಾಗೂ ಇತರ ಅಧಿಕಾರಿಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಮಹಮ್ಮದ್ ಜುಬೇರ, ಸ್ವಚ್ಛ ಸರ್ವೇ ಕ್ಷಣ ಅಭಿಯಾನದ ವಿಜಯಕುಮಾರ್ ಸೇರಿದಂತೆ ಜಿಲ್ಲಾ ನಗರಾಭಿವೃದ್ಧಿಕೋಶದ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಸ್ವಚ್ಛ ಸರ್ವೇ ಕ್ಷಣ ಎಂದರೆ...

ಭಾರತ ಸರ್ಕಾ ರದ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯವು ರಾಷ್ಟ್ರದ ನಗರಗಳ ಸ್ವಚ್ಛತೆ ಮತ್ತು ನೈರ್ಮಲ್ಯತೆ ಬಗೆಗೆ ಜನಜಾಗೃತಿ ಮೂಡಿಸಲು ಸ್ವಚ್ಛ ಸರ್ವೇ ಕ್ಷಣ 2020 ಅಭಿಯಾನ ಹಮ್ಮಿಕೊಂಡಿದೆ. ಇದರಲ್ಲಿ 6000 ಅಂಕಗಳಿದ್ದು, ಸಾರ್ವಜನಿಕರ ಪ್ರತಿಕ್ರಿಯೆಗೆ 1500 ಅಂಕಗಳನ್ನು ನಿಗದಿಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರವು ಅಗ್ರ ರ್ಯಾಂಕ್ ಪಡೆಯಲು ಸಾರ್ವಜನಿಕರ ಪ್ರತಿಕ್ರಿಯೆ ಮುಖ್ಯವಾಗಿದ್ದು, ಸ್ವಚ್ಛ ಸರ್ವೇ ಕ್ಷಣ ತಂಡವು ಕೇಳುವ ಪ್ರಶ್ನೆಗಳಿಗೆ ನಾಗರಿಕರು ಸಕಾರಾತ್ಮಕವಾಗಿ ಉತ್ತರಿಸುವ ಮೂಲಕ ಈ ಬಾರಿಯ ಸರ್ವೇ ಕ್ಷಣೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರವು ಉತ್ತಮ ರ್ಯಾಂಕ್ ಪಡೆಯುವುದರ ಮೂಲಕ ಗಾಂಧೀಜಿಯವರ ಕನಸಿನಂತೆ ಸ್ವಚ್ಛ ಹಾಗೂ ಅಭಿವೃದ್ಧಿ ಹೊಂದಿದ ಭಾರತ ದೇಶವನ್ನು ನಿರ್ಮಾ ಣ ಮಾಡಲು ಸಹಕರಿಸಬೇಕು. 

ನಾಗರೀಕರು ಬಳಸುವ ಆ್ಯಂಡ್ರಾಯಡ್ ಮೊಬೈಲ್, ಐಫೋನ್, ಐಪ್ಯಾಡ್ಗಳಲ್ಲಿ ಗೂಗಲ್ ಪ್ಲೇಸ್ಟೋರ್ದಲ್ಲಿ ಸ್ವಚ್ಛತಾ ಆ್ಯಪ್ (ಖತಿಚಿಛಿಚಿಣಚಿ ಂಠಿಠಿ) ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆ ನೊಂದಾಯಿಸಿಕೊಳ್ಳಬೇಕು. ನಂತರ ತಮ್ಮ ವಾಸಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಸ್ವಚ್ಛತೆ, ನೈರ್ಮಲ್ಯತೆ ಕುರಿತು ತಮ್ಮ ಸಲಹೆ, ದೂರು, ಅಭಿಪ್ರಾಯಗಳನ್ನು ದಾಖಲಿಸಬಹುದು. 

ಸ್ವಚ್ಛ ಸರ್ವೇ ಕ್ಷಣ ತಂಡದಿಂದ ಕೆಲವು ಪ್ರಮುಖ ಪ್ರಶ್ನೆಗಳನ್ನು ಅವಳಿ ನಗರದ ಸಾರ್ವಜನಿಕರಿಗೆ ಕೇಳಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ ನಗರವು ಸ್ವಚ್ಛ ಸರ್ವೇ ಕ್ಷಣ-2020 ರಲ್ಲಿ ಭಾಗವಹಿಸುತ್ತಿರುವುದು ತಿಳಿದಿದೆಯೇ?, ನಗರದ ಸುತ್ತ-ಮುತ್ತಲಿನ ಪರಿಸರದ ಸ್ವಚ್ಛತೆಗೆ 200 ಅಂಕಗಳಿಗೆ ಎಷ್ಟು ಅಂಕಗಳನ್ನು ಕೊಡುತ್ತೀರಿ?, ನಗರದ ವಾಣಿಜ್ಯ ಮತ್ತು ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆಯ ಬಗ್ಗೆ 200 ಅಂಕಗಳಲ್ಲಿ ಎಷ್ಟು ಅಂಕಗಳನ್ನು ಕೊಡುತ್ತೀರಿ?, ಮಹಾನಗರ ಪಾಲಿಕೆಯವರು ಪ್ರತಿನಿತ್ಯ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ನೀಡುವಂತೆ ಮಾಹಿತಿ ತಿಳಿಸುತ್ತಾರೆಯೇ?, ನಗರದ ರಸ್ತೆ ವಿಭಜಕಗಳು ಸಮರ್ಪಕವಾಗಿ ಗಿಡಗಳಿಂದ ಆವರಿಸಿವೆಯೇ?, ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಸ್ವಚ್ಛತೆಯ ಬಗ್ಗೆ 200 ಅಂಕಗಳಿಗೆ ಎಷ್ಟು ಅಂಕ ಕೊಡುತ್ತೀರಿ?, ನಗರವು ಬಯಲುಶೌಚಮುಕ್ತ ಮತ್ತು ತ್ಯಾಜ್ಯಮುಕ್ತ ನಗರವಾಗಿರುವುದು ತಿಳಿದಿದೆಯೇ?... ಎಂಬ ಪ್ರಶ್ನೆಗಳಿರುತ್ತವೆ. 

ಸ್ವಚ್ಛ ಸರ್ವೇ ಕ್ಷಣ ಪರಿವೀಕ್ಷಣೆ ತಂಡವು  ಸಾರ್ವಜನಿಕರನ್ನು ನೇರವಾಗಿ ಸಂದರ್ಶಿ ಸುವ ಅಥವಾ ಧ್ವನಿಮುದ್ರಿತ ಕರೆಗಳ ಮೂಲಕ  ಉತ್ತರಗಳನ್ನು ಪಡೆಯಬಹುದು.