ಬೀಜಿಂಗ್, ಫೆ 13: ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಚೀನಾದ ನಾಲ್ವರು ಸೇನಾ ಸಿಬ್ಬಂದಿ ಮೇಲೆ ದೋಷಾರೋಪಣೆ ಹೊರಿಸಲು ಅಮೆರಿಕ ನಡೆಸಿರುವ ಕ್ರಮವನ್ನು ಚೀನಾ ರಕ್ಷಣಾ ಸಚಿವಾಲಯ ಗುರುವಾರ ಖಂಡಿಸಿ, ಪ್ರತಿಭಟಿಸಿದೆ.
ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ನಾಲ್ವರು ಸಿಬ್ಬಂದಿ 2017 ರಲ್ಲಿ ಕ್ರೆಡಿಟ್ ರಿಪೋರ್ಟಿಂಗ್ ಏಜೆನ್ಸಿಯಾದ ಇಕ್ವಿಫಾಕ್ಸ್‌ನ ವ್ಯವಸ್ಥೆಗಳಿಗೆ ಕನ್ನ ಹಾಕಿ ಕನಿಷ್ಠ 150 ದಶಲಕ್ಷ ಅಮೆರಿಕ ನಾಗರಿಕರ ಹೆಸರು ಮತ್ತು ಸಾಮಾಜಿಕ ಭದ್ರತೆ ಸಂಖ್ಯೆಯನ್ನು ಕದ್ದಿದ್ದಾರೆ ಎಂದು ಅಮೆರಿಕ ಅಟಾರ್ನಿ ಜನರಲ್ ವಿಲಿಯಂ ಬಾರ್ ಸೋಮವಾರ ವರದಿಗಾರರಿಗೆ ಮಾಹಿತಿ ನೀಡಿದ್ದರು.
‘ ಅಮೆರಿಕದ ಇಂತಹ ಕ್ರಮಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಇದು ಸಂಪೂರ್ಣವಾಗಿ ದಬ್ಬಾಳಿಕೆ ಮತ್ತು ನ್ಯಾಯಾಂಗ ಕಿರುಕುಳದ ಕೆಲಸವಾಗಿದೆ. ಇದನ್ನು ಚೀನಾ, ಬಲವಾಗಿ ಖಂಡಿಸಿ, ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತದೆ. ಚೀನಾ ಎಂದಿಗೂ ಸೈಬರ್ ಸುರಕ್ಷತೆಗೆ ಬೆಂಬಲವಾಗಿ ನಿಂತಿದ್ದು, ಎಲ್ಲ ರೀತಿಯ ಸೈಬರ್ ಅಪರಾಧಗಳನ್ನು ಖಂಡಿಸುತ್ತದೆ ಎಂದು ಚೀನಾ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ,
ಅಮೆರಿಕ ಸರ್ಕಾರ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಅಲ್ಲದೆ, ಗೂಢಚರ್ಯೆ ಮತ್ತು ವಿದೇಶಿ ಸರ್ಕಾರಗಳು ಮತ್ತು ಕಂಪನಿಗಳ ಮೇಲೆ ಕಣ್ಗಾವಲು ಇಟ್ಟು ಸೈಬರ್ ಅಪರಾಧಗಳನ್ನು ಮಾಡುತ್ತಿದೆ. ವಿಕಿಲೀಕ್ಸ್ ಮತ್ತು ಮಾಜಿ ಸಿಐಎ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಪ್ರಕರಣಗಳು ಇದಕ್ಕೆ ನಿದರ್ಶನವಾಗಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ದೂರಿದೆ.