ಇಸ್ಲಾಮಾಬಾದ್, ನ 6: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಡಿ ಬರುವ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಹಕಾರವನ್ನು ಹೆಚ್ಚಿಸಲು ಚೀನಾ ಮತ್ತು ಪಾಕಿಸ್ತಾನಗಳು ಸಿಪಿಇಸಿಯ 9ನೇ ಜಂಟಿ ಸಹಕಾರ ಸಮಿತಿ (ಜೆಸಿಸಿ) ಸಭೆಯಲ್ಲಿ ಸಮ್ಮತಿಸಿವೆ. ಈ ವರ್ಷದಲ್ಲಿ ಯೋಜನೆ ಕುರಿತ ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ. ಉಳಿದವುಗಳನ್ನು ವರ್ಷದ ಅಂತ್ಯದ ವೇಳೆಗೆ ಸಾಧಿಸಲಾಗುವುದು ಎಂದು ಪಾಕಿಸ್ತಾನದ ಯೋಜನೆ, ಅಭಿವೃದ್ಧಿ ಮತ್ತು ಸುಧಾರಣಾ ಸಚಿವ ಖುಸ್ರೊ ಬಖ್ತಿಯಾರ್ ಸಭೆಯ ಆರಂಭಿಕ ಭಾಷಣದಲ್ಲಿ ಹೇಳಿದ್ದಾರೆ. 'ಚೀನಾದ ನಾಯಕತ್ವದೊಂದಿಗಿನ ಪ್ರಧಾನಿ ಇಮ್ರಾನ್ ಖಾನ್ ಅವರ ಇತ್ತೀಚಿನ ಭೇಟಿಗಳು ಮತ್ತು ಅವರ ಮಾತುಕತೆಗಳು ನಿಜವಾದ ಅರ್ಥದಲ್ಲಿ, ಕೃಷಿ, ಕೈಗಾರಿಕಾ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಿವೆ ಮತ್ತು ಹೆಚ್ಚಿಸಿವೆ.' ಎಂದು ಅವರು ಹೇಳಿದರು. ಎರಡೂ ಕಡೆಯ ಸರ್ಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳ ಪರವಾಗಿ ಸುಮಾರು 200 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇಡೀ ಪ್ರದೇಶ ಮತ್ತು ಅದಕ್ಕೂ ಮೀರಿ ಸಹಕಾರದ ಬಾಗಿಲು ತೆರೆಯುವ ಕಾರಿಡಾರ್ ಸಿಪಿಇಸಿ ಆಗಿದೆ. ತಮ್ಮ ದೇಶ ಸಿಪಿಇಸಿ ಪ್ರಾಧಿಕಾರವನ್ನು ಸ್ಥಾಪಿಸಿದೆ. ಇದು ಸಿಪಿಇಸಿ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಏಕ ಗವಾಕ್ಷಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಪಾಕಿಸ್ತಾನ ಸರ್ಕಾರವು ಯೋಜನೆಗಳ ವೇಗವನ್ನು ಹೆಚ್ಚಿಸುತ್ತದೆ ಮತ್ತು ಯೋಜನೆಗಳ ಸಮರ್ಥ ಅನುಷ್ಠಾನಕ್ಕಾಗಿ ಅಡ್ಡಿ-ಆತಂಕಗಳನ್ನು ತೊಡೆದು ಹಾಕುತ್ತದೆ ಎಂದು ಪಾಕ್ ಸಚಿವ ಖುಸ್ರೊ ಬಖ್ತಿಯಾರ್ ಹೇಳಿದರು.