ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಡಾ. ಆನಂದ ಪಾಂಡುರಂಗಿ

ಧಾರವಾಡ 25: ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪ್ರತಿಯೊಬ್ಬ ನಾಗರಿಕನು ಕಾಳಜಿಯಿಂದ ಕರ್ತವ್ಯ ನಿಭಾಯಿಸಬೇಕು. ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು ಹಾಗೂ ಅಂತರ್ಜಾಲ  ಆಧಾರಿತ ಪಬ್ಜಿ, ಫೊಮೊದಂತಹ ಹಾನಿಕಾರಕ ಆಟಗಳಿಂದ ಪಾಲಕರು ಮಕ್ಕಳನ್ನು ದೂರವಿಡಬೇಕು ಎಂದು  ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅಭಿಪ್ರಾಯ ಪಟ್ಟರು.

ಬಾಲನ್ಯಾಯ ಕಾಯ್ದೆ-2015 ಸೆಕ್ಷನ್ 41(1) ರಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,  ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸರ್ಕಾರಿ  ವೀಕ್ಷಣಾಲಯದ ಸಭಾಂಗಣದಲ್ಲಿ ಇಂದು  ಏರ್ಪಡಿಸಿದ್ದ     ವೈಯಕ್ತಿಕ ಪೋಷಣಾ ಯೋಜನೆ ಮತ್ತು ಸಾಮಾಜಿಕ ತನಿಖಾ ವರದಿ ತಯಾರಿಸುವ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವವನ್ನು ಉದ್ಘಾಟಿಸಿ ಅವರು ಮಾತನಾಡಿದರು, 

ಬಾಲ್ಯ ವಿವಾಹಕ್ಕೊಳಗಾದ ಅಪ್ರಾಪ್ತ ವಯಸ್ಕರು, ಬಾಲ ಕಾರ್ಮಿಕ , ಪೊಕ್ಸೊ ಕಾಯ್ದೆ, ಕಾನೂನಿನ ಸಂಘರ್ಷಕ್ಕೊಳಪಟ್ಟ, ಚಿಂದಿ ಆಯುತ್ತ ಬೀದಿಗಳಲ್ಲಿ ಅಲೆಯುತ್ತಿರುವ, ನಶೆಯಲ್ಲಿ ತಿರುಗುತ್ತಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವಂತಹ ಕಾರ್ಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ, ಆರೋಗ್ಯ, ಅನಾರೋಗ್ಯಗಳ ಭಿನ್ನತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾದ ಚಿಲಿಪ್ರಕಾಶನ ಮುಖ್ಯಸ್ಥರಾದ  ಶಂಕರ ಹಲಗತ್ತಿ ಮಾತನಾಡಿ, ಪವಿತ್ರ ಎನ್ನುವ ಪದ ಮಕ್ಕಳ ಸೇವೆಯಲ್ಲಿಯೇ ಇದೆ. ಸಮಾಜದಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಿ  ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು. 

ಬಾಲನ್ಯಾಯ ಮಂಡಳಿಯ ಸದಸ್ಯರಾದ  ಡಾ. ಪೂರ್ಣಿಮಾ ಗೌರೋಜಿ ಮಾತನಾಡಿ, ಸಾಮಾಜಿಕ ತನಿಖಾ ವರದಿ ಮತ್ತು ವೈಯಕ್ತಿಕ ಪಾಲನಾ ಯೋಜನೆ ಕುರಿತು ನಡೆಸುವ ಕಾರ್ಯಾಗಾರವು ಮಕ್ಕಳ ವಿವಿಧ ಬೆಳವಣಿಗೆಯಲ್ಲಿ  ಮಹತ್ವದ ಪಾತ್ರ ವಹಿಸಲಿದೆ ಎಂದರು. 


ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಅಶೋಕ ಯರಗಟ್ಟಿ,  ಮಾತನಾಡಿ,  ಸಂಸ್ಥೆಯಲ್ಲಿರುವ ಮಕ್ಕಳನ್ನು ಸ್ವಂತ ಮಕ್ಕಳಂತೆ ಬೆಳೆಸಿ ಆರೈಕೆ ಮಾಡಿದರೆ ಮಾತ್ರ ಮಕ್ಕಳ ಪಾಲನಾ ಸಂಸ್ಥೆಯ ಉದ್ದೇಶ ಈಡೇರುತ್ತದೆ. ಹಾಗೆಯೇ ಸಮಾಜದಲ್ಲಿ ಸೇವೆ ಮಾಡುವವರು ಹಣ ತೆಗೆದುಕೊಳ್ಳುವುದಿಲ್ಲ. ಹಣ ತೆಗೆದುಕೊಳ್ಳುವವರು ಸೇವೆ ಮಾಡುವುದಿಲ್ಲ, ಮಗುವಿಗೆ ಪುನರ್ವಸತಿ ಕಲ್ಪಿಸಿ ಪಾಲಕರೊಂದಿಗೆ ಪುನರ್ಮಿಲನಗೊಳಿಸುವುದು ಈ ತರಬೇತಿ ಕಾರ್ಯಾ ಗಾರದ ಮಹದಾಶೆ ಎಂದರು.  

ಕಾರ್ಯಾಗಾರದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಅನ್ನಪೂರ್ಣ ಸಂಗಳದ  ಮಾತನಾಡಿ,ಮಕ್ಕಳ ಪಾಲನಾ ಸಂಸ್ಥೆಯ ಕನಿಷ್ಠ ಮೂಲಭೂತ ಸೌಕರ್ಯಗಳಾದ ಪೌಷ್ಠಿಕ ಆಹಾರ, ಶುದ್ಧ ಕುಡಿಯುವ ನೀರು, ಬಟ್ಟೆ, ಸ್ವಚ್ಚತೆ, ಕಟ್ಟಡಗಳ ಕುರಿತು ಮಾಹಿತಿ ನೀಡಿದರು.

ಕೊಪ್ಪಳದ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕ, ರಾಘವೇಂದ್ರ ಭಟ್ ಮಾತನಾಡಿ, ಒಂದು ಮಗುವಿನ ಸರ್ವತೋಮುಖ ಅಭಿವೃಧ್ಧಿಗೆ ಸಾಮಾಜಿಕ ತನಿಖಾ ವರದಿಯು ಮಗುವಿನ ಭವಿಷ್ಯವನ್ನು ನಿಮರ್ಿಸಲು ಪೂರಕವಾಗಿರುತ್ತದೆ. ಈ ವರದಿಯನ್ನು ಬಹಳ ನಿಷ್ಠೆಯಿಂದ ನಿರ್ವಹಿಸುವುದು ಅತ್ಯಗತ್ಯ ಎಂದರು. 

 ಯುನಿಸೆಫ್ ನೋಡಲ್ ಅಧಿಕಾರಿ ಹರೀಶ ಜೋಗಿ ಮಾತನಾಡಿ, ಮಕ್ಕಳ ಪುನರ್ವಸತಿಯಲ್ಲಿ ವೈಯಕ್ತಿಕ ಪೋಷಣಾ ವರದಿ, ಮಕ್ಕಳ ಆಸಕ್ತಿಗಳನ್ನು ತಿಳಿಯುವಲ್ಲಿ  ಸಹಕಾರಿಯಾಗುತ್ತದೆ. ಈ ಯೋಜನೆಯನ್ನು ತಯಾರಿಸುವವರು ತಾಳ್ಮೆಯಿಂದ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆದು ವರದಿ ತಯಾರಿಸಬೇಕಾಗುತ್ತದೆ ಎಂದು ತಿಳಿಸಿದರು.  

ಪ್ರಕಾಶ ಕೊಡ್ಲಿವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಭಾರತ ಸಕರ್ಾರ ಬಾಲನ್ಯಾಯ ಕಾಯ್ದೆಯನ್ನು ಜಾರಿಗೆ ತಂದಿದ್ದು, ವಿವಿಧ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿಗೊಳಿಸಲು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ಎಲ್ಲಡೆಯು ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮಕ್ಕಳ ಸಾಮಾಜಿಕ ತನಿಖಾ ವರದಿ ಹಾಗೂ ವೈಯಕ್ತಿಕ ಪೋಷಣಾ ಯೋಜನೆಯನ್ನು ತಯಾರಿಸುವುದು ಕಡ್ಡಾಯವೆಂದು  ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ ಎಂದರು. 

ಶ್ವೇತಾ ಕಿಲ್ಲೇದಾರ ನಿರೂಪಿಸಿದರು. ನೂರಜಹಾನ ಕಿಲ್ಲೇದಾರ ಸ್ವಾಗತಿಸಿದರು, ನಿಂಗಪ್ಪ ಮಡಿವಾಳರ ವಂದಿಸಿದರು. ಕಾರ್ಯಕ್ರಮದಲ್ಲಿ ಈರಪ್ಪ ಬಿಳಿಜಾಡರ, ಬಾಲ ನ್ಯಾಯ ಮಂಡಳಿ , ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, 30 ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳು, ಸಂಯೋಜಕರು, ಪರಿವೀಕ್ಷಣಾಧಿಕಾರಿಗಳು ಹಾಗೂ ಆಪ್ತಸಮಾಲೋಚಕರು, ಶಿಕ್ಷಕರು, ಗೃಹಪಾಲಕರು ಸೇರಿದಂತೆ  ಜನರು ಭಾಗವಹಿಸಿದ್ದರು.