ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವು ಅಗತ್ಯವಿದೆ- ಬಸವರಾಜ ಬೊಮ್ಮಾಯಿ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವು ಅಗತ್ಯವಿದೆ- ಬಸವರಾಜ ಬೊಮ್ಮಾಯಿ Children need awareness of culture along with education - Basavaraja Bommai

  

ರಾಣೇಬೆನ್ನೂರ 20: ಯಾವುದೇ ಒಂದು ಸಂಘ ಸಂಸ್ಥೆ ಬೆಳೆಯಬೇಕಾದರೆ, ಅಲ್ಲಿನ ಮುಖ್ಯಸ್ಥರ, ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರಂತರ ಪ್ರಯತ್ನ ವಿರುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ,ಸಂಸ್ಕೃತಿ ಅರಿವು ನೀಡಬೇಕಾದ ಇಂದಿನ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.  ಅವರು ಶನಿವಾರ ಇಲ್ಲಿನ ಟ್ಯಾಗೂರು ಶಿಕ್ಷಣ ಸಂಸ್ಥೆಯ, ರೋಟರಿ ಸಮೂಹ ಶಿಕ್ಷಣ ಸಂಸ್ಥೆಯ 50ನೇ ವರ್ಷಾಚರಣ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.  

 21ನೇ ಶತಮಾನ ಇತಿಹಾಸದ ಯಾವುದಕ್ಕೂ ಸಾಟಿ ಇಲ್ಲದ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಹೊಂದಿದ ಶತಮಾನವಾಗಿದೆ. ಮಕ್ಕಳಲ್ಲಿ ಎಲ್ಲ ರೀತಿಯ ಜ್ಞಾನ ಮತ್ತು ಅರಿವು ಇದೆ ಶಿಕ್ಷಕರಾದವರು ಭಾರತ ದೇಶದ ಸಂಸ್ಕೃತಿ ಮತ್ತು ಪರಂಪರೆ ಇಲ್ಲಿನ ಆಚಾರ ವಿಚಾರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ ಪರಿಪೂರ್ಣಗೊಳಿಸಲು ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.  

 ಗಿಳಿ ಪಾಠಕ್ಕೆ ಮಾತ್ರ ಸೀಮಿತವಾಗದೆ, ಅವರಲ್ಲಿ ಪ್ರಶ್ನೆ ಕೇಳುವ ಹವ್ಯಾಸ ಬೆಳೆಸಬೇಕು ಶಿಕ್ಷಣ ಪರಿಪೂರ್ಣತೆಗೆ ಸಹಕಾರಿಯಾಗುವುದು ಎಂದರು. ಬಾಲ್ಯದ ನೆನಪು ಮತ್ತು ಕಲಿಸಿದ ಗುರುಗಳ ನೆನಪು ಯಾರಿಗೂ ಎಂದಿಗೂ ಮರೆಯಾಗುವುದಿಲ್ಲ. ಯಾರನ್ನು ಮರೆಯಬಹುದು ಆದರೆ ವಿದ್ಯೆ ನೀಡಿದ ಗುರುಗಳನ್ನು ಯಾರು ಮರೆಯುವುದಿಲ್ಲ ಅದಕ್ಕೆ ನೀಡಿದ ಸಂಸ್ಕಾರವೇ ಮುಖ್ಯವಾಗಿರುತ್ತದೆ ಎಂದರು.  

     ಮುಖ್ಯ ಅತಿಥಿಯಾಗಿದ್ದ, ಶಾಸಕ ಪ್ರಕಾಶ ಕೋಳಿವಾಡ ಅವರು, ಇಂದಿನ ವಿದ್ಯಾರ್ಥಿಗಳು, ತಮ್ಮ ಶಿಕ್ಷಣದ ಜೊತೆಗೆ ಕೌಶಲ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಕ್ತಿತ್ವ ನಿರ್ಮಾಣ, ಸಾಮಾನ್ಯ ಜ್ಞಾನ ಹೊಂದಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿದೆ.  

 ತಾವು ಸಹ ರೋಟರಿ ಶಾಲೆಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇಲ್ಲಿನ ಗುರುಗಳು ಅಂದು ತಮಗೆ ನೀಡಿದ ಸಂಸ್ಕಾರ ಮತ್ತು ಸಂಸ್ಕೃತಿಯ ಶಿಕ್ಷಣವೇ ಇಂದಿನ ನಮ್ಮ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗಿದೆ ಎಂದರು.  

    ರೋಟರಿ ಜಿಲ್ಲಾ ರಾಜ್ಯಪಾಲ ಶರತ್ ಫೈ ಅವರು, ರೋಟರಿ ಸಂಸ್ಥೆ ತನ್ನ ಶೈಕ್ಷಣಿಕ ವ್ಯವಸ್ಥೆಯ ಮೂಲಕ ಅತ್ಯುತ್ತಮ ಕಾರ್ಯ ಮಾಡಿದೆ. ಇಂತಹ ಪರಂಪರೆ ಪ್ರತಿಯೊಬ್ಬ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಸೇವಾ ಭಾವನೆಯ ಕಾರ್ಯಗಳಿಗೆ ಮಹತ್ವ ಬರಲಿದೆ ಎಂದು ಆಡಳಿತಕ್ಕೆ ಅಭಿನಂದಿಸಿದರು.  

 ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಬಸವರಾಜ ಕೇಲಗಾರ ಅವರು, ಅಂದಿನ ಸದಸ್ಯರು ನಮ್ಮ ದೂರ ದೃಷ್ಟಿಯಿಂದಾಗಿ  1971ರಲ್ಲಿ ರೋಟರಿ ಸಂಸ್ಥೆಯಿಂದ, ಪ್ರಾರ್ಥಮಿಕ ವಿಭಾಗ ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಹಂತ ಹಂತವಾಗಿ, ಪೊಲೀಸ್ ಕ್ವಾಟ್ರಸ್ ಬಳಿ 19 ಗುಂಟೆ,  

 ನಂತರ ಇಲ್ಲಿ ಒಟ್ಟು 12 ಎಕರೆ ಪ್ರದೇಶದಲ್ಲಿ ಆಧುನಿಕ ಸೌಲಭ್ಯವುಳ್ಳ ವಿಶಾಲ ಕಟ್ಟಡ, ಕಂಪ್ಯೂಟರ್ ರೂಮ್ಸ್‌, ಲ್ಯಾಬ್, ಸುಸಜ್ಜಿತ ಬೋಧನಾ ಕೊಠಡಿಗಳು ಮತ್ತು ಅಧಿಕ ಪ್ರಮಾಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರು ಬಳಗವು  ಹೊಂದಿದೆ ಎಂದರು.  

ಶಿಕ್ಷಣ ಸಂಸ್ಥೆಯಿಂದ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಸಾಧನೆ ಮೆರೆದ ಐಶ್ವರ್ಯ ಲದ್ವಾ, ಪಲ್ಲವಿ ಹಲಗೇರಿ, ಭುವನ ನಾಡಗೇರ, ರವಿಶಂಕರ ಕೊಟ್ಟೂರ, ರತನ ಗುಪ್ತಾ, ಅಪೂರ್ವ ಕೇಲಗಾರ, ದೀಪಾ ಜಂಬಿಗಿ, ಪ್ರಶಾಂತ್ ಗಿಡ್ಡಪ್ಪಗೋಳ ಸೇರಿದಂತೆ ನೂರಾರು ಸಾಧಕರನ್ನು, ಅಂದಿನಿಂದ ಇಂದಿನವರೆಗೆ ತಮ್ಮ ಸೇವೆ ಸಲ್ಲಿಸಿದ ಆಡಳಿತ ಮಂಡಳಿಗಳ ಎಲ್ಲಾ ಸದಸ್ಯರು, ಮತ್ತು ಶಿಕ್ಷಕರು ಗಳನ್ನು ಹೃದಯಸ್ಪರ್ಶಿ   ಅಭಿನಂದಿಸಿ ಸನ್ಮಾನಿಸಲಾಯಿತು.  

ವೇದಿಕೆಯಲ್ಲಿ ಕೆ ವಿ ಶ್ರೀನಿವಾಸ್, ಡಾಕ್ಟರ್ ನಾರಾಯಣ ಪವಾರ, ವೀರೇಶ್ ಮೋಟಗಿ, ಅರವಿಂದಕುಮಾರ್ ಜೈನ್, ವಿ. ಪಿ. ಲಿಂಗನಗೌಡ್ರ, ಸಿ.ಎಸ್‌. ಕುರುವತ್ತಿ, ವ್ಹಿ. ಪಿ. ಪೊಲೀಸ್ ಗೌಡ್ರ, ಜಗದೀಶ್ ಕಲ್ಯಾಣಿ, ಇನ್ನರ್ವಿಲ್ ಅಧ್ಯಕ್ಷ ಡಾ. ದೀಪಾಲಿ ಪುನೀತ ಮತ್ತಿತರರು ಇದ್ದರು.