ಮಕ್ಕಳಲ್ಲಿನ ಪ್ರತಿಭೆ, ಕಾವ್ಯ ರಚನೆ ಯಾರ ಸ್ವತ್ತಲ್ಲ

ಲೋಕದರ್ಶನ ವರದಿ

ಅಥಣಿ 12: ಮಕ್ಕಳಲ್ಲಿನ ಪ್ರತಿಭೆ ಮತ್ತು ಕಾವ್ಯ ರಚನೆ ಯಾರ ಸ್ವತ್ತಲ್ಲ, ಕವಿತೆಗಳನ್ನು ರಚಿಸುವ  ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ಉದಯೋನ್ಮುಖ ಸಾಹಿತಿಗಳಾಗಿ ಬೆಳೆಯುತ್ತಾರೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಅಮರೇಶ ಬಿರಾದಾರ ಹೇಳಿದರು.

  ಅವರು ಇಲ್ಲಿನ ಕಾಶಿಬಾಯಿ ಆಂಗ್ಲ ಮಾಧ್ಯಮ  ಪ್ರೌಢ ಶಾಲೆಯ ಮಕ್ಕಳ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಕು. ಶ್ರೇಯಾ ದಾನಪ್ಪನವರ ವಿರಚಿತ  ಮನದಾಳ ತಿಳಿದಾಗ ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. 

ಮನದಾಳದ ವಿಚಾರಗಳು ಮತ್ತು ಸ್ಪೂರ್ತಿದಾಯಕ ಭಾವನೆಗಳು ಕವಿತೆಗಳ ಮೂಲಕ ಹೊರಹೊಮ್ಮಬೇಕು. ನಾವು ಬರೆಯುವ ಕವನದಿಂದ ಬದುಕಿನ ಏಳ್ಗೆ ಮತ್ತು ಸಮಾಜದ ಬದಲಾವಣೆ ಆಗಬೇಕು ಎಂದರು. ಕಿರಿಯ ವಯಸ್ಸಿನಲ್ಲಿ ಶ್ರೇಯಾ ಅವರಿಗೆ ಕಾವ್ಯ ರಚನೆ ಮಾಡುವ ಪ್ರತಿಭೆ ದೈವದತ್ತವಾಗಿದೆ. ಅವಳು 10 ನೇ ತರಗತಿಯಲ್ಲಿ ಓದುವಾಗಲೇ ಚೊಚ್ಚಲ ಕವನ ಸಂಕಲನ ಹೊರ ತಂದಿರುವದು ಹೆಮ್ಮೆಯ ವಿಚಾರವಾಗಿದೆ. ಅವಳ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.

  ಸಾನಿಧ್ಯ ವಹಿಸಿದ್ದ ಶೇಗುಣಸಿಯ ಮಹಾಂತ ದೇವರು ಮಾತನಾಡಿ ಸಂವೇದನಾಶೀಲ ವ್ಯಕ್ತಿಯು ತನ್ನ ಭಾವನೆಗಳನ್ನು  ಕವನಗಳ ಮೂಲಕ ಹೇಳುತ್ತಾನೆ. ಜೀವನಸಂದೇಶ ನೀಡುವ ಕವನಗಳನ್ನು ರಚಿಸಿರುವ  ಕು. ಶ್ರೇಯಾ   ವಿದ್ಯಾಬ್ಯಾಸದ ಜೊತೆಗೆ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಚಿಕ್ಕಟ್ಟಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

  ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ ವಿನಯ ಮತ್ತು ವಿನೂತನ ಕಾರ್ಯಗಳಿಂದ ಗಮನ ಸೆಳೆದ ಕು.ಶ್ರೇಯಾ ದಾನಪ್ಪನವರ ಬಾಲ ಕವಿಯತ್ರಿಯಾಗಿ ಬೆಳೆಯುತ್ತಿರುವದು ನಮ್ಮ ಸಂಸ್ಥೆಗೂ ಹೆಮ್ಮೆಯ ಸಂಗತಿಯಾಗಿದೆ. ಅವಳ ಕಾವ್ಯ ಕೃಷಿಗೆ ನಮ್ಮ ಪ್ರೋತ್ಸಾಹ ಯಾವತ್ತು ಇರುತ್ತದೆ ಎಂದು  ಹೇಳಿದರು. ಸಂಸ್ಥೆಯ ವತಿಯಿಂದ ಕು. ಶ್ರೇಯಾ ದಾನಪ್ಪನವರ ಮತ್ತು ಅವರು ತಂದೆ ತಾಯಿಯನ್ನು ಗೌರವಸಲಾಯಿತು. ಶಿಕ್ಷಕ ರವಿ ಉಳ್ಳಾಗಡ್ಡಿ  ಕು.ಶ್ರೇಯಾಳಿಗೆ ಕಾವ್ಯ ಗಾಂಧಾರಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.

  ಈ ವೇಳೆ ರೋಟರಿ ಕ್ಲಬ್ ಅಥಣಿ ದಕ್ಷಿಣದ  ಸಂಸ್ಥಾಪಕ ಅಧ್ಯಕ್ಷ ಸಿದ್ದಾರೂಢ ಸವದಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ ಇನ್ನೀತರರು ಉಪಸ್ಥಿತರಿದ್ದರು. ಟಿ.ಎಂ ಮೊಗರೆ ಸ್ವಾಗತಿಸಿದರು. ಜ್ಯೋತಿ ಪಾಟೀಲ ನಿರೂಪಿಸಿದರು. ಸದಾಶಿವ ಚಿಕ್ಕಟ್ಟಿ ವಂದಿಸಿದರು.