ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ: ಚೋಳಿನ

Children's literature is literature that opens children's minds and arouses curiosity: Cholin

ಧಾರವಾಡ 21: ಮಕ್ಕಳ ಮನಸ್ಸನ್ನು ಅರಳಿಸಿ ಅದರಲ್ಲಿ ಕುತೂಹಲ ಕೆರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ. ಈ ಸಾಹಿತ್ಯ ಮಕ್ಕಳ ಭಾವನೆಯನ್ನು ಉದಾತ್ತಗೊಳಿಸುತ್ತದೆ ಎಂದು ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮದ ಮುಖ್ಯ ಡಾ. ಶರಣಬಸವ ಚೋಳಿನ ಅಭಿಪ್ರಾಯಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘವು, ಕವಿ. ಬಿ.ಕೆ. ಹೊಂಗಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2025 ಪ್ರದಾನ ಹಾಗೂ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಮಕ್ಕಳ ಸಾಹಿತ್ಯ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರುಗಳನ್ನು ಜಾನಪದ ಪರಂಪರೆಯಲ್ಲಿ ವಿಫುಲವಾಗಿ ಕಾಣಬಹುದು. ಜಾನಪದ ಪರಂಪರೆಯ ಗೋವಿನ ಹಾಡು, ಪಂಜೇ ಮಂಗೇಶರಾಯರ ‘ನಾಗರ ಹಾವೇ! ಹಾವೊಳು ಹೂವೆ!’ ಎಂಬ ಹಾಡು ಇಂದಿಗೂ ಮಕ್ಕಳನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ದುರ್ಗಸಿಂಹನ ಪಂಚತಂತ್ರದ ಕಥೆಗಳು, ಈಸೋಪನ ನೀತಿಯ ಕಥೆಗಳು ಮಕ್ಕಳಲ್ಲಿ ಉದಾತ್ತ ಚಿಂತನೆ, ನೈತಿಕ ಮೌಲ್ಯ ಬಿತ್ತುತ್ತವೆ. ಶಂ. ಗು. ಬಿರಾದರ, ಆನಂದ ಪಾಟೀಲ ಮಕ್ಕಳ ಹಾಡುಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಕಲ್ಪನಾಶಕ್ತಿ ಪ್ರಚೋದಿಸುತ್ತವೆ.  

ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಕ್ಕಳು ಭಯದ ವಾತಾವರಣದಲ್ಲಿ ಬೆಳೆಯದೇ ಸಾಹಿತ್ಯ ಓದುವ, ರಚನೆ ಮಾಡುವ ಒಳ್ಳೆಯ ಹವ್ಯಾಸವನ್ನು ಬಾಲ್ಯದಿಂದಲೇ ಪಾಲಕರು ಬೆಳೆಸಬೇಕು. ಧಾರವಾಡ ಆಕಾಶವಾಣಿ ಆ ದೆಸೆಯಲ್ಲಿ ಮಕ್ಕಳಿಗಾಗಿ ಅನೇಕ ಮೋಹಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತ ಬಂದಿದೆ. ಮಕ್ಕಳಲ್ಲಿ ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದರು.  

2025ರ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಸ್ವೀಕರಿಸಿ, ಮಕ್ಕಳ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಮಾತನಾಡಿ, ಈ ಪ್ರಶಸ್ತಿ ನನಗೆ ಬಯಸದೇ ಬಂದ ಭಾಗ್ಯವಾಗಿದೆ. ಮಕ್ಕಳ ಸಾಹಿತ್ಯ ಇನ್ನೂ ವಿಫುಲವಾಗಿ ಬೆಳೆದು ಬರಬೇಕಿದೆ. ಜಾನಪದದ ಗರತಿಯ ಹಾಡುಗಳು ಮಕ್ಕಳ ಸಾಹಿತ್ಯವಾಗಿದೆ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಗಂಗಾಧರ ದೊಡವಾಡ  ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ಈ ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಉಳುವಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಮಕ್ಕಳಿಗೆ ಆಂಗ್ಲಭಾಷಾ ಮಾಧ್ಯಮ ಕಲಿಕೆಗಿಂತ ಸಾಹಿತ್ಯ ಕಡೆಗೆ ಒಲವು ಮೂಡಿಸಬೇಕೆಂದು ಹೇಳಿದರು. 

ಕವಿ ಬಿ.ಕೆ. ಹೊಂಗಲ್ ಮಕ್ಕಳ ಸಾಹಿತ್ಯದ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ದತ್ತಿದಾನಿ ಸೋಮನಾಥ ಹೊಂಗಲ ಇದ್ದರು.  

ಕೆಲಗೇರಿಯ ಸಂಗಮೇಶ್ವರ ಜಾನಪದ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರ್ವಹಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಸುರೇಶ ಗುದಗನವರ, ಡಾ. ಬಾಳಣ್ಣಾ ಶೀಗೀಹಳ್ಳಿ, ರಾಮಚಂದ್ರ ಧೋಂಗಡೆ, ಎಂ.ಎಸ್‌. ನರೇಗಲ್ ಸೇರಿದಂತೆ ಹೊಂಗಲ್ ಪರಿವಾರದವರು ಉಪಸ್ಥಿತರಿದ್ದರು.