ಧಾರವಾಡ 12: ಮಕ್ಕಳ ಮನೋವೈಜ್ಞಾನಿಕ ಅಂಶಗಳಿಗೆ ಒತ್ತು ನೀಡಿ ಮಕ್ಕಳ ಲೋಕದ ವಿಶಿಷ್ಟತೆಯನ್ನು ಕಟ್ಟಿಕೊಡುವಲ್ಲಿ ಡಾ. ಆನಂದ ಪಾಟೀಲ ಅವರು ಯಶಸ್ವಿಯಾಗಿದ್ದಾರೆಂದು ಲೇಖಕಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಮೊನ್ನೆ ಧಾರವಾಡದ ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಕೂಟವು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಅನುಸಂಧಾನ ಮಾಲಿಕೆಯಲ್ಲಿ ಹಿರಿಯ ಮಕ್ಕಳ ಲೇಖಕ ಡಾ. ಆನಂದ ಪಾಟೀಲ ಅವರ ಕೃತಿಗಳಲ್ಲಿನ ಗದ್ಯ ಬರವಣಿಗೆಯ ವಿಶಿಷ್ಟತೆಯನ್ನು ಕುರಿತು ಮಾತನಾಡುತ್ತಿದ್ದರು.
ಕನ್ನಡ ಮಕ್ಕಳ ಸಾಹಿತ್ಯದ ಚರಿತ್ರೆಯಲ್ಲಿ ಕವನ, ಕಥಾಮಾದರಿಗಳೆ ಹೆಚ್ಚಿದ್ದು ಲಲಿತ ಪ್ರಬಂಧ, ಹರಟೆ, ಸನ್ನಿವೇಶದ ಚಿತ್ರಣ, ಸ್ವಾರಸ್ಯಕರವಾದ ನಿರೂಪಣೆ ಮುಂತಾದವು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು ಡಾ. ಆನಂದ ಪಾಟೀಲ ಅವರು ಈ ರೀತಿಯ ಹಲವಾರು ಪ್ರಯೋಗಗಳನ್ನು ಮಾಡುವ ಮೂಲಕ ಹೊಸಬರಿಗೆ ಮಾದರಿಯಾಗಿದ್ದಾರೆಂದು ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಇಂದಿನ ಮಕ್ಕಳ ಮನೋಧರ್ಮ ಹಿಂದಿನ ಮನೋಧರ್ಮಕ್ಕಿಂತ ಬೇರೆಯಾಗಿದ್ದು ಬದಲಾದ ಸನ್ನಿವೇಶದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಮತ್ತು ಅವರನ್ನು ಸೃಷ್ಟಿಶೀಲವಾಗಿಸುವ ಸಾಹಿತ್ಯದ ರಚನೆಯ ಅಗತ್ಯವಿದೆ ಎಂದು ಅವರು ಹೇಳಿದರು. ಹಂದಿ, ಹಲ್ಲಿ, ಕತ್ತೆ, ಕಾಗೆ ಮುಂತಾದ ಪ್ರಾಣಿ-ಪಕ್ಷಿಗಳ ಜೊತೆಗೆ ಮಕ್ಕಳ ಒಡನಾಟ, ಮಕ್ಕಳ ಲೋಕದ ನೆನಪು ಪಾಟೀಲರ ಕೃತಿಗಳ ಜೀವಾಳವಾಗಿವೆ ಎಂದರು. ಆನಂದ ಪಾಟೀಲ ಅವರ 'ಎದ್ದು ನಿಂತ ಬಾಲ', 'ಹತ್ತು ಹತ್ತು ಇಪ್ಪತ್ತು' ಮುಂತಾದ ಪುಸ್ತಕಗಳಲ್ಲಿನ ಮಕ್ಕಳ ಜಗತ್ತು ತುಂಬ ಸಹಜತೆ, ತಮಾಷೆಯ ಪ್ರಸಂಗ ಹಾಗೂ ಮಾನವೀಯ ಸಂಗತಿಗಳನ್ನು ಒಳಗೊಂಡಿವೆ ಎಂದು ಪಟ್ಟಣಶೆಟ್ಟಿ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಡಾ. ಬಸು ಬೇವಿನಗಿಡದ ಅವರು ಇಂದಿನ ಹಲವಾರು ಬರಹಗಾರರು ಮಕ್ಕಳ ಸಂವೇದನೆಗಳಿಗೆ ಒತ್ತು ಕೊಟ್ಟು ಬರೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಶಾಲೆ ಮತ್ತು ಮನೆಗಳಲ್ಲಿ ಮಕ್ಕಳಿಗೆ ಸಾಹಿತ್ಯದ ಸಮಯ ಹಾಗೂ ಓದಿನ ವಾತಾವರಣವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಿಕೊಡುವುದು ಅಗತ್ಯವಿದೆ ಎಂದು ಹೇಳಿದರು.
ಉಪನ್ಯಾಸದ ನಂತರ ಸಿ.ಯು.ಬೆಳ್ಳಕ್ಕಿ, ಕೆ.ಎಚ್.ನಾಯಕ, ಶ್ರೀನಿವಾಸ ವಾಡಪ್ಪಿ, ಮನೋಜ ಪಾಟೀಲ, ಸರಸ್ವತಿ ಭೋಸಲೆ, ರಾಜಶೇಖರ ಕುಕ್ಕಂದಾ, ಡಾ. ನಿಂಗು ಸೊಲಗಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ರೊಟ್ಟಿಗವಾಡ, ಲಕ್ಷ್ಮೀಕಾಂತ ಇಟ್ನಾಳ, ಡಾ. ಸಿದ್ದಪ್ಪ ಎನ್, ಶೈಲಾ ಛಬ್ಬಿ, ರಾಮಚಂದ್ರ ಧೋಂಗಡೆ, ಗುರುಮೂರ್ತಿ ಯರಗಂಬಳಿಮಠ, ಎಸ್.ಪಿ.ಹೂಗಾರ, ಸಿದ್ದಪ್ಪ ಬಿರಾದಾರ, ಪ್ರೊ. ಎ.ಜಿ.ಸಬರದ, ಶಿವಪುತ್ರಯ್ಯ ರಾಚಯ್ಯನವರ, ಬಿ.ಕೆ.ಹೊಂಗಲ ಸೇರಿದಂತೆ ಇನ್ನೂ ಅನೇಕ ಸಹೃದಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕಾರ್ನಾಡ ಅವರಿಗೆ ಒಂದು ನಿಮಿಷದ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪ್ರಾರಂಭದಲ್ಲಿ ಸರಸ್ವತಿ ಭೋಸಲೆ ಅವರು ಅಕ್ಕಮಹಾದೇವಿಯ ಒಂದು ವಚನವನ್ನು ಸಾದರಪಡಿಸಿದರು. ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಕೂಟದ ಜಿ.ಬಿ.ಹೊಂಬಳ ಅವರು ಕೊನೆಯಲ್ಲಿ ಮಾತನಾಡಿ ಮಕ್ಕಳ ಸಾಹಿತ್ಯದ ಮಹತ್ವವನ್ನು ಮತ್ತು ಅದರ ವಿಮರ್ಶೆ , ಪರಿಚಯಗಳನ್ನು ವಿಸ್ತರಿಸುವುದು ಈ ಗೆಳೆಯರ ಕೂಟದ ಉದ್ದೇಶವಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.