ಕಾಗವಾಡ 25: ಶಾಲಾ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಮಗಳವಾರ ದಿ. 24 ರಂದು ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು.
ಮಕ್ಕಳು ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಬೇಲ್‌ಪುರಿ, ಬೋಂಡಾ, ಬಜ್ಜಿ, ಚಹಾ, ಟೀ, ಬಟ್ಟೆಗಳು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿದರು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರ ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು.
ಮಕ್ಕಳು ಹೆಚ್ಚೆಚ್ಚು ವ್ಯಾಪಾರ ಮಾಡಬೇಕೆಂಬ ಛಲದಿಂದ ಪೋಷಕರನ್ನು ಕರೆದು ತಂದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿರುವ ದೃಷ್ಯ ಸಾಮಾನ್ಯವಾಗಿತ್ತು.
ಈ ವೇಳೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ್ ಮಾತನಾಡಿ, ಮಕ್ಕಳಲ್ಲಿ ವ್ಯವಹಾರ ಜ್ಞಾನದ ಅಭಿವೃದ್ದಿಗೆ ಮಕ್ಕಳ ಸಂತೆ ಹೆಚ್ಚು ಪ್ರೇರಣೆ ನೀಡುತ್ತದೆ. ಮಕ್ಕಳು ಜೀವನ ನಡೆಸಲು ವ್ಯವಹಾರ ಜ್ಞಾನದ ಅರಿವು ಮೂಡಿಸಬೇಕು. ಪೋಷಕರು ಮಕ್ಕಳನ್ನು ಅಂಗಡಿಗೆ ಕಳುಹಿಸಿದರೇ ವ್ಯಾಪಾರ ಮಾಡಿ, ಸಾಮಗ್ರಿ ತರುವ ಶಕ್ತಿ ಬೆಳೆಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಶಾಸ್ತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅನೇಕ ಉದ್ಯಮಗಳಲ್ಲಿ ವಾಣಿಜ್ಯ ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಪ್ರಾಯೋಗಿಕವಾಗಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆಗಳನ್ನು ನಡೆಸಬೇಕು ಎಂದರು. ರಾಜೇಂದ್ರ ಕರವ ಮಕ್ಕಳ ಸಂತೆಗೆ ಚಾಲನೆ ನೀಡಿದರು.
ಈ ವೇಳೆ ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಾಜೇಂದ್ರ ಕರಾವ, ಅನೀಲ ಕೋರೆ, ಬಾಳಗೌಡ ಪಾಟೀಲ, ಮಹಾದೇವ ಕೋಳೆಕರ, ಪ್ರಶಾಂತ ನಾಯ್ಕ, ಆರ್.ಟಿ. ಗುರವ, ಎಂ.ಬಿ. ಪಾಟೀಲ, ಬಿ.ಡಿ. ಪಾಟೀಲ, ಓಂಕಾರ ಗುಮೆಟೆ, ವಿನಾಯಕ ರಾಮದುರ್ಗ, ಆರ್.ಎಸ್. ಹಿರೇಮಠ, ಪ್ರಾಂಶುಪಾಲ ಅಶ್ವಿನಿ ಅವತಾಡೆ ಸೇರಿದಂತೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.