ತೊಗುಣಶಿಯಲ್ಲಿ ಚಿಕುನ್ ಗುನ್ಯಾ: ನಿತ್ಯ 10-15 ಜನರು ಆಸ್ಪತ್ರೆಗೆ

ಗುಳೇದಗುಡ್ಡ: ಸಮೀಪದ ತೊಗುಣಶಿ ಗ್ರಾಮದಲ್ಲಿ ಕಳೆದ ಏಳೆಂಟು ದಿನಗಳಿಂದ ಚಿಕುನ್ಗುನ್ಯಾ ಜ್ವರ ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ 10-15ಜನರು ಜ್ವರದಿಂದ ಬಳಲುತ್ತ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 

ತೊಗುಣಶಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಇದರಿಂದ ಚಿಕುನ್ ಗುನ್ಯಾ ಹೆಚ್ಚಿದೆ. ಮಂಗಳವಾರ ಜ್ವರದಿಂದ ಬಳಲುತ್ತಿದ್ದ 10-15 ರೋಗಿಗಳು ಸರದಿ ಸಾಲಿನಲ್ಲಿ ನಿಂತು ಸಲಾಯನ್ ಹಚ್ಚಿಸಿಕೊಂಡಿದ್ದು ಕಂಡು ಬಂದಿತು. 

ಎಲ್ಲೆಂದರಲ್ಲಿ ನೀರು ನಿಂತು ಕೊಳಚೆ ಪ್ರದೇಶದಂತಾಗಿದೆ. ಗಟಾರ ಸ್ವಚ್ಚಗೊಳಿಸಿಲ್ಲ. ಗ್ರಾಮದಲ್ಲಿ ಪಂಚಾಯಿತಿಯವರು ಸ್ವಚ್ಛತೆ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ 70-80ಜನರ ರೋಗಿಗಳು ಬರುತ್ತಿದ್ದು, ಅದರಲ್ಲಿ ತೊಗುಣಶಿ ಗ್ರಾಮದ ಸುಮಾರು 30-40ರೋಗಿಗಳು ಜ್ವರದಿಂದ ಬಳಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇದುವರೆಗೂ ಗ್ರಾಮದಲ್ಲಿ 100-120ಜನರಿಗೆ ಜ್ವರ ಕಾಣಿಸಿಕೊಂಡಿದೆ. ಗ್ರಾಮ ಪಂಚಾಯಿತಿಯವರು ಎರಡು ದಿನಗಳ ಹಿಂದೆ ಸೊಳ್ಳೆಗಳ ನಿಯಂತ್ರಣಕ್ಕೆ ಹೊಗೆ ಹೊಡೆದಿದ್ದಾರೆ. ಅಲ್ಲದೇ ಫಾಗಿಂಗ್ ಮಾಡಿದ್ದಾರೆ. ಆರೋಗ್ಯ ಇಲಾಖೆಯವರು ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಮದಲ್ಲಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. 

ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮದಲ್ಲಿ ಪಂಚಾಯಿತಿಯವರು ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಜ್ವರ ಕಾಣಿಸಿಕೊಂಡಿದೆ. ನಿತ್ಯ 70-80ಜನರು ಬರುತ್ತಿದ್ದು, ಅದರಲ್ಲಿ 30-40ರೋಗಿಗಳು ತೊಗುಣಶಿ ಗ್ರಾಮದವರೇ ಇದ್ದು, ಚಿಕುನ್ ಗುನ್ಯಾ ಜ್ವರದ ಬಗ್ಗೆ 4-5ಜನರ ರಕ್ತ ತಪಾಸಣೆಗೆ ಕಳುಹಿಸಿದ್ದೇನೆ. ಅದರಲ್ಲಿ ಒಂದು ಚಿಕುನ್ ಗುನ್ಯಾ ಪಾಸಿಟಿವ್ ಬಂದಿದೆ. ಗ್ರಾಮದಲ್ಲಿ ಫಾಗಿಂಗ್ ಮಾಡಲು ಪಂಚಾಯಿತಿಯವರಿಗೂ ತಿಳಿಸಿದ್ದೇವೆ. ಗ್ರಾಮಸ್ಥರು, ಪಂಚಾಯಿತಿಯವರು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಹುಲ್ಲಿಕೇರಿಯಲ್ಲಿ ಒಬ್ಬರಿಗೆ ಡೆಂಗ್ಯು ಪಾಸಿಟಿವ್ ಬಂದಿದೆ. ಸದ್ಯ ಹುಲ್ಲಿಕೇರಿಯಲ್ಲಿ ಜ್ವರ ನಿಯಂತ್ರಣಕ್ಕೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ, ತೊಗುಣಶಿಯ ವೈದ್ಯಾಧಿಕಾರಿ ಡಾ.ಬಸವರಾಜ ಹೆಬ್ಬಾಳ ತಿಳಿಸಿದ್ದಾರೆ.