ಬೆಂಗಳೂರು, ಜ 8 ಶೃಂಗೇರಿಯಲ್ಲಿ ಶುಕ್ರವಾರದಿಂದ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯದಂತೆ ಮಾಡಲು ಯತ್ನಿಸುತ್ತಿರುವ ರಾಜ್ಯಸರಕಾರದ ನಡೆ ಖಂಡನೀಯ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಜತೆ ಪೋಲೀಸರು ಹಾಗೂ ಶೃಂಗೇರಿ ನಗರಸಭೆ ಅತ್ಯಂತ ವ್ಯವಸ್ಥಿತವಾಗಿ ವಿವಿಧ ರೀತಿಯಲ್ಲಿ ಸಮ್ಮೇಳನಕ್ಕೆ ಅಡೆತಡೆ ಉಂಟು ಮಾಡುತ್ತಿದೆ ಎಂದು ತಿಳಿದು ಆಘಾತವಾಯಿತು ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇದು, ಸಾಂಸ್ಕ್ರತಿಕ ಸ್ವಾಯತ್ತತೆಯ ಮೇಲೆ ಸರಕಾರ ನಡೆಸಿರುವ ನೇರ ಹಲ್ಲೆಯಾಗಿದೆ. ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನುಬಳಿಗಾರ್ ಸರಕಾರದ ಈ ನಡೆಯನ್ನು ಪ್ರತಿಭಟಿಸಬೇಕು. ಸಂಸ್ಥೆಯ ಸ್ವಾಯತ್ತತೆಯನ್ನು ಸರಕಾರವು ಗೌರವಿಸುವ ತನಕ ಸರಕಾರದ ಸಹಾಯಧನವನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡ ಜನತೆ ತಾನೇ ಮುಂದೆ ನಿಂತು ಸಮ್ಮೇಳನವನ್ನು ಯಶಸ್ವಿಯಾಗಿಸಲು ಹೊರಟಿರುವ, ಹಣ ಮತ್ತಿತರ ಸಹಾಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಬ್ಬ ಸಾಮಾನ್ಯ ಸಾಂಸ್ಕ್ರತಿಕ ಕಾರ್ಯಕರ್ತನಾದ ನಾನು ಈ ಕೆಲಸದಲ್ಲಿ ಹೆಮ್ಮೆಯಿಂದ ಕೈಜೋಡಿಸಲು ಬಯಸುತ್ತೇನೆ ಎಂದು ಪ್ರಸನ್ನ ಹೇಳಿದ್ದಾರೆ.