ಚಿಕ್ಕಬಳ್ಳಾಪುರ: ಅಬಕಾರಿ ಇಲಾಖೆಯಿಂದ 428 ಕಡೆ ಮೇಲೆ ದಾಳಿ

ಚಿಕ್ಕಬಳ್ಳಾಪುರ, ಏ.8,ಜಿಲ್ಲೆಯಾದ್ಯಂತ ಕೊರೋನಾ ವೈರೆಸ್ ಹರಡದಂತೆ ಹಾಗೂ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಅಬಕಾರಿ ಸನ್ನದುಗಳನ್ನು ಮಾರ್ಚ್ 21 ರಂದು ಮುಚ್ಚಿಸಲಾಗಿತ್ತು.ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಇಲಾಖೆಯಿಂದ ಮಾರ್ಚ್ 21 ರಿಂದ ಏಪ್ರಿಲ್‌ 7 ರವರೆಗೆ ಅಬಕಾರಿ ಇಲಾಖೆಯು 428 ಕಡೆ ದಾಳಿಯನ್ನು ನಡೆಸಲಾಗಿದೆ. ಇದರಲ್ಲಿ 10 ಘೋರ ಪ್ರಕರಣಗಳು ಕೂಡ ದಾಖಲಾಗಿವೆ. ಈ ದಾಳಿಯಲ್ಲಿ  1518. 780 ಲೀಟರ್ ಅಕ್ರಮ ಮದ್ಯ, 357.025 ಲೀಟರ್ ಅಕ್ರಮ ಬೀರ್, 47 ಲೀಟರ್ ಸೇಂದಿ, 1.500 ಲೀಟರ್ ಕಳ್ಳಭಟ್ಟಿ ಸಾರಾಯಿ, 2 ವಿವಿಧ ನಮೂನೆಯ ದ್ವಿಚಕ್ರ ವಾಹನಗಳನ್ನು ಜಪ್ತುಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲುನ ಎನ್. ವಿನಯ್ ಇವರ ಹೆಸರಿಗೆ 2019-20ನೇ ಸಾಲಿಗೆ ನವೀಕರಿಸಿರುವ  ನಾಮಗೊಂಡ್ಲು ಗ್ರಾಮದ ಸರ್ವೆ ನಂ; 160/3ರಲ್ಲಿನ ಕಟ್ಟಡದಲ್ಲಿರುವ ನಾಗಜ್ಯೋತಿ ವೈನ್ಸ್ ಸಿಎಲ್-2 ಸನ್ನದಿಗೆ ಇಲಾಖಾ ಮೊಹರು ಮಾಡಿರುವ ಸೀಲ್ ಅನ್ನು ತೆಗೆದು ಮದ್ಯವನ್ನು ಮಾರಾಟ ಮಾಡಿರುವುದರಿಂದ ಈ ಸನ್ನದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಏಪ್ರಿಲ್ 2 ರಂದು ರದ್ದುಪಡಿಸಿ ಎಂದು ಆದೇಶಿಸಿರುತ್ತಾರೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರಾದ ಜಿ.ಪಿ ನರೇಂದ್ರಕುಮಾರ್ ತಿಳಿಸಿದ್ದಾರೆ.