ಬೆಂಗಳೂರು, ಮಾ.19, ಉಡುಪಿ ಜಿಲ್ಲೆಯಲ್ಲಿ 250 ಬೆಡ್‌ಗಳ ಜಿಲ್ಲಾಸ್ಪತ್ರೆ ನಿರ್ಮಿಸಲು ಮುಂದಿನ ಸಾಲಿನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.ವಿಧನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರಾದ ರಘುಪತಿ ಭಟ್ ಮತ್ತು ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ವರ್ಷಗಳಿಂದ ಉಡುಪಿಗೆ 250 ಬೆಡ್‌ಗಳ ಆಸ್ಪತ್ರೆ ನಿರ್ಮಾಣದ ಬೇಡಿಕೆ ಇದೆ. ಮುಂದಿನ ಸಾಲಿನಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದರು.
ಇದಕ್ಕೂ ಮೊದಲು ಶಾಸಕರಾದ ರಘುಪತಿ ಭಟ್ ಮತ್ತು ಸುನೀಲ್ ಕುಮಾರ್, ಉಡುಪಿ ಜಿಲ್ಲೆ ಘೋಷಣೆಯಾಗಿ ಹಲವು ವರ್ಷಗಳು ಕಳೆದಿದ್ದರೂ ಅಲ್ಲಿನ ತಾಲೂಕು ಆಸ್ಪತ್ರೆಯ ಬೋರ್ಡ್ ಮಾತ್ರ ಬದಲಾಯಿಸಿ ಜಿಲ್ಲಾ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಆದರೆ ಸಿಬ್ಬಂದಿ ಮತ್ತು ವೈದ್ಯರನ್ನು ಜಿಲ್ಲಾ ಆಸ್ಪತ್ರೆಗೆ ಅನುಗುಣವಾಗಿ ಕೊಟ್ಟಿಲ್ಲ. ಈ ಹಿಂದಿನ ಆರೋಗ್ಯ ಸಚಿವರು ಕೂಡ ಈ ಬೇಡಿಕೆಯನ್ನು ಈಡೇರಿಸಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಬಜೆಟ್‌ನಲ್ಲಿಯೇ ಇದನ್ನು ಘೋಷಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ ಈಡೇರಿಲ್ಲ. ಈಗಲಾದರೂ ಮುಖ್ಯಮಂತ್ರಿ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು. ಆರೋಗ್ಯ ಸಚಿವ ಬಿ.ಶ್ರೀರಾಮುಲು ಉತ್ತರಿಸಿ, ತಾವು ಉಡುಪಿಗೆ ಭೇಟಿ ನೀಡಿದಾಗ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಈ ವಿಷಯದಲ್ಲಿ ಚರ್ಚಿಸಿದ್ದೇನೆ. ಮೊದಲ ಹಂತದಲ್ಲಿ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿ ಪ್ರಸ್ತಾಪವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಅನುಮತಿ ಸಿಕ್ಕಿದ ತಕ್ಷಣ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.