‘ಅಪಘಾತ’ಗಳನ್ನೇ ಅಣಕಿಸಿದ ‘ಮುಖ್ಯಮಂತ್ರಿ’ -ಎಸ್‍ ಆಶಾ ಕಶ್ಯಪ್

ಬೆಂಗಳೂರು, ಡಿ 26,ನಟ ಮುಖ್ಯಮಂತ್ರಿ ಚಂದ್ರು ಯಾರಿಗೆ ಗೊತ್ತಿಲ್ಲ ಹೇಳಿ? ವಿಶೇಷವಾದ ಆಂಗಿಕ ಅಭಿನಯ, ಸಂಭಾಷಣಾ ವೈಖರಿಯಿಂದ ಖಳ, ಪೋಷಕ, ಹಾಸ್ಯನಟರಾಗಿ ಕನ್ನಡ ಚಿತ್ರರಸಿಕರ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ  ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಚಂದ್ರು, ಕಲಾಗಂಗೋತ್ರಿ ರಂಗ ತಂಡದ ಮೂಲಕ ಪ್ರದರ್ಶಿಸಿದ ‘ಮುಖ್ಯಮಂತ್ರಿ’ ನಾಟಕದ ಜನಪ್ರಿಯತೆಯಿಂದಾಗಿ ಪರ್ಮನೆಂಟ್ ಮುಖ್ಯಮಂತ್ರಿಯಾದರು  ಸದಾ ಎಲ್ಲರನ್ನೂ ನಗಿಸುವ ಇಂತಹ ವ್ಯಕ್ತಿ ಅದೆಷ್ಟು ಬಾರಿ ಅಪಘಾತಕ್ಕೀಡಾಗಿದ್ದಾರೆ, ಏನೆಲ್ಲ ಸಂಕಷ್ಟಗಳನ್ನು ಎದುರಿಸಿದ್ದಾರೆ, ರಂಗಭೂಮಿ, ಚಿತ್ರರಂಗ, ಮೈಮ್, ರಾಜಕೀಯ, ರಿಯಾಲಿಟಿ ಶೋಗಳೆಲ್ಲವೂ ಆಕಸ್ಮಿಕವಾಗಿಯೇ ದೊರಕಿದೆ ಎಂದು ತಿಳಿದರೆ ನೀವು ಖಂಡಿತ ಬೆಚ್ಚಿಬೀಳುತ್ತೀರಿ!   ಇವರು ಮುಖ್ಯಮಂತ್ರಿ ಚಂದ್ರುನಾ ಅಥವಾ ಅಕ್ಸಿಡೆಂಟ್ ಚಂದ್ರುನಾ ಅಂತ ಉದ್ಗರಿಸುತ್ತೀರಿ  ಅಂದಹಾಗೆ ಆಕ್ಸಿಡೆಂಟ್ ಎಂದರೆ ‘ಅಪಘಾತ’ವೂ ಹೌದು, ‘ಆಕಸ್ಮಿಕ’ ವೂ ಹೌದು   ಈ ಎರಡೂ ಪದಗಳು ಮುಖ್ಯಮಂತ್ರಿ ಚಂದ್ರು ಅವರ ಜೀವನದ ಘಟನೆಗಳಿಗೆ ಅನ್ವಯವಾಗುತ್ತದೆ  ಚಂದ್ರು ತಮ್ಮ ಜೀವನದಲ್ಲಿ ನಡೆದ ಆಕಸ್ಮಿಕಗಳು ಹಾಗೂ ಆಪಘಾತಗಳ ಬಗ್ಗೆ ಯುಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ತೆರೆದಿಟ್ಟಿದ್ದು ಹೀಗೆ. . .   ಒಮ್ಮೆ ‘ಮೋಡಗಳು’ ನಾಟಕದ ರಿಹರ್ಸಲ್‍ಗೆ ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಮೇಷ್ಟ್ರು ಹಾಗೂ ಡಾ ರಾಜಾರಾಂ ಮೂವರು ಆಟೋದಲ್ಲಿ ಹೊರಟಿದ್ದರಂತೆ  ಎದುರಿನಿಂದ ಬರುತ್ತಿದ್ದ ಟೆಂಪೋ ಡಿಕ್ಕಿಯಾಗಿ ಆಟೋ 3 ಪಲ್ಟಿ ಹೊಡೆದು, ಚಂದ್ರು ಫುಟ್‍ಪಾತ್‍ಗೆ ಬಿದ್ದು, ಕಿವಿ ಹರಿದುಕೊಂಡರಂತೆ  ರಾಜಾರಾಂ ಬುರುಡೆಗೆ ಪೆಟ್ಟಾದರೆ, ಶ್ರೀನಿವಾಸ ಮೇಷ್ಟ್ರು ಆಟೋ ಒಳಗೆ ಕಂಬಿ ಹಿಡಿದು ಕುಳಿತು ಬಚಾವಾದರಂತೆ  ಇನ್ನು ಚಂದ್ರು ಮತ್ತು ರಾಜಾರಾಂ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಹೋದರೆ, ಅನಸ್ತೇಷಿಯಾವನ್ನೇ ನೀಡದೆ ಕಿವಿಗೆ ಹೊಲಿಗೆ ಹಾಕಿದರಂತೆ  “ಡಾಕ್ಟ್ರೇ ಸ್ವಲ್ಪ ಬೇಗ ಚಿಕಿತ್ಸೆ ಕೊಡಿ” ಎಂದಿದ್ದಕ್ಕೆ, ಅಲ್ಲಿ ಕೈಕಾಲು ಮುರಿದುಕೊಂಡಿರುವವರೇ ಕಾಯ್ತಾ ಇದ್ದಾರೆ . . . ಕೂತ್ಕೊಳ್ರಿ ಸುಮ್ನೆ” ಅಂತ ವೈದ್ಯರು ಗದರಿದ್ದನ್ನೂ ಚಂದ್ರು ನೆನಪಿಸಿಕೊಂಡರು  ಇನ್ನೊಮ್ಮೆ ಡಾ ರಾಜ್‍ಕುಮಾರ್ ಅಭಿನಯದ ‘ಜ್ವಾಲಾಮುಖಿ’ ಚಿತ್ರದಲ್ಲಿ ನಟಿಸುತ್ತಿದ್ದ ಸಂದರ್ಭ   ಧ್ವನಿಪೆಟ್ಟಿಗೆಯೇ ಒಡೆಯಿತು  ಆಗ ಚಂದ್ರು ಶಾಸಕರೂ ಆಗಿದ್ದರಂತೆ   ವಿಷಯ ತಿಳಿದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮುಂಬೈಗೆ ಕಳುಹಿಸಿ ವಿಶೇಷ ಚಿಕಿತ್ಸೆ ಕೊಡಿಸಿದ ಬಳಿಕ, 20 ದಿನದ ನಂತರ ಧ್ವನಿ ಬಂದು ನಿಡಿದಾದ ನಿಟ್ಟುಸಿರು ಬಿಟ್ಟರಂತೆ ಚಂದ್ರು  1985-86ರ ಅವಧಿಯ ಇನ್ನೊಂದು ಘಟನೆಯನ್ನು ಮುಖ್ಯಮಂತ್ರಿ ಚಂದ್ರು ನೆನಪಿಸಿಕೊಂಡಿದ್ದರು ಹೀಗೆ. . . “ನಟ ದೊಡ್ಡಣ್ಣ ಅವರೊಡನೆ ‘ನೋಡು ಬಾ ನಮ್ಮೂರ’ ಚಿತ್ರದಲ್ಲಿ ಶಾಲೆಯೊಂದರ ಬಳಿ ಚಿತ್ರೀಕರಣ ನಡೆಯುತ್ತಿತ್ತು  ರೈಲ್ವೆ ಕಂಬಿ ಕತ್ತರಿಸಿ ಮಾಡಿದ್ದ ಶಾಲಾ ಬೆಲ್‍ ಕೆಳಗೆ ನಾನು ಕುಳಿತಿದ್ದೆ  ದೊಡ್ಡಣ್ಣನನ್ನು ನೋಡುತ್ತಾ ಡೈಲಾಗ್ ಹೇಳಿ ಎದ್ದಾಗ, ಕಬ್ಬಿಣದ ಬೆಲ್‍ ತಲೆಗೆ ತಗುಲಿ ಬುರುಡೆ ತೂತಾಯಿತು   ಪುಣ್ಯಕ್ಕೆ ಮೆದುಳಿಗೆ ಹಾನಿಯಾಗಿರಲಿಲ್ಲ” ಎಂದರು  ಹೆಂಗಸರು ನನ್ನ ಬಲಗಡೆ ಕುಳಿತುಕೊಳ್ಳಬೇಡಿ. . .   ಮುಖ್ಯಮಂತ್ರಿ ಚಂದ್ರು ತಮ್ಮ ಬಲಭಾಗದಲ್ಲಿ ಹೆಂಗಸರನ್ನು ಕೂರಿಸಿ ಮಾತನಾಡುವುದಿಲ್ಲವಂತೆ!  ಏಕೆಂದರೆ ಅವರಿಗೆ ಬಲಗಣ್ಣಿಗೆ ದೃಷ್ಟಿ ಇಲ್ಲ  ಕೇವಲ ಎಡಗಣ್ಣಿನಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯ   ಅಪ್ಪಿತಪ್ಪಿ ಕೈ ಎಲ್ಲಿಗಾದರೂ ತಾಗಿ ಹೆಣ್ಣುಮಕ್ಕಳು ಬೇಸರಿಸುವುದು ಬೇಡ ಎಂದು ನನ್ನ ಬಲಭಾಗಕ್ಕೆ ಕುಳಿತುಕೊಳ್ಳದಂತೆ ಸೂಚಿಸುತ್ತೇನೆ.  ಈ ಅಪಘಾತ ಕೂಡ  ಚಿತ್ರವೊಂದರ ಶೂಟಿಂಗ್ ವೇಳೆ ಕಣ್ಣಿಗೆ ಪೆಟ್ಟಾಗಿ ದೃಷ್ಟಿ  ಕಳೆದುಕೊಳ್ಳಬೇಕಾಯಿತಂತೆ  ಇಂತಹ ಅನೇಕ ಅಪಘಾತ ಹಾಗೂ ಆಕಸ್ಮಿಕಗಳ ಬಗ್ಗೆ ಹಂಚಿಕೊಂಡ ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ ಗ್ರಾಮೀಣ ಪ್ರದೇಶದ ಪ್ರತಿಭೆ  ತುಮಕೂರಿನ ಸಿದ್ದಗಂಗಾಮಠದ ಆಶ್ರಯದಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ನಡೆಸಿ, ನಂತರ ಬೆಂಗಳೂರಿನಲ್ಲಿ ಬಂಧುಗಳ ಮನೆಯಲ್ಲುಳಿದು ಕಾಲೇಜು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಾರೆ  ಕೆಲಸದ ಹುಡುಕಾಟದದಲ್ಲಿದ್ದ ಚಂದ್ರಶೇಖರನಿಗೆ ಬೆಂಗಳೂರು ವಿವಿಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ ಬಳಿಕ ಅದೃಷ್ಟವಶಾತ್ ರಂಗಭೂಮಿಯ ಹಲವು ತಂಡಗಳೊಂದಿಗೆ ಒಡನಾಟದ ಅವಕಾಶ   ಎರಡು ವರ್ಷದ ನಾಟಕ ಡಿಪ್ಲೋಮಾ ಶಿಕ್ಷಣದ ನಂತರ ಆರಂಭವಾದ ರಂಗಭೂಮಿಯ ಸೇವೆ ನಿರಂತರವಾಗಿ ಮುಂದುವರಿಸಿದ್ದಾರೆ  ಆದರ್ಶ ಪತಿ, ತಂದೆ, ತಾತ!  ಮುಖ್ಯಮಂತ್ರಿ ಚಂದ್ರು ಕನ್ನಡ ನಾಡು, ನುಡಿಗೆ ಹೋರಾಟ ಮಾಡುತ್ತ, ಇತ್ತ ಕಲಾ ಸೇವೆಯಲ್ಲೂ ತೊಡಗಿಕೊಳ್ಳುತ್ತ, ಮನೆ ಮಂದಿಯನ್ನೂ ಪ್ರೀತಿಯಿಂದ ಕಾಣುತ್ತ ಆದರ್ಶ ಎನಿಸಿಕೊಂಡಿದ್ದಾರೆ  ನನ್ನ ಜೀವನದಲ್ಲಿ ಪತ್ನಿ ಪದ್ಮಾಳೇ ಎಲ್ಲ ಎನ್ನುವ ಚಂದ್ರು, “ನಮ್ಮಿಬ್ಬರದು ಹಿರಿಯರು ನಿಶ್ಚಯಿಸಿದ ವಿವಾಹ  10ನೇ ತರಗತಿ ಓದಿದ್ದ ಆಕೆ ಮುಗ್ಧೆ   ಆದರೆ ಮದುವೆಯಾದ ಬಳಿಕ ಎಲ್ಲವನ್ನೂ ಚುರುಕಾಗಿ ಕಲಿತು, ಮೂರ್ನಾಲ್ಕು ಚಿತ್ರಗಳಲ್ಲೂ ನಟಿಸಿದ್ದಾರೆ  ಸಂಸ್ಥೆಯೊಂದರ ಅಧ್ಯಕ್ಷೆಯಾಗಿ ನಿರರ್ಗಳವಾಗಿ ಭಾಷಣ ಮಾಡುತ್ತಾರೆ” ಎಂದರು  ಇನ್ನು, ಹಿರಿಯ ಮಗ ಭರತ್ ಮಾಹಿತಿ ವಿಜ್ಞಾನದಲ್ಲಿ ಎಂಎಸ್‍ ಮಾಡಿ, ಖಾಸಗಿ ಕಂಪನಿಯಲ್ಲಿ ಅಧಿಕಾರಿಯಾಗಿದ್ದಾರೆ  ಸೊಸೆ ನಿಶಿತಾ ಕೋಟಾ ಮೂಲದವರಾಗಿದ್ದು, ಅಹನಾ ಹೆಸರಿನ ಮಗಳಿದ್ದಾಳೆ  ಕಿರಿಯ ಪುತ್ರ ಶರತ್ ಪದವೀಧರರಾಗಿದ್ದು, ಫಿಟ್‍ನೆಸ್ ತರಬೇತಿ ನೀಡುತ್ತಿದ್ದಾರೆ  ಚಿತ್ರರಂಗದತ್ತ ಒಲವಿದ್ದು, ಪ್ರಯತ್ನಗಳೂ ನಡೆಯುತ್ತಿವೆ ಎಂದು ತಮ್ಮ ಕುಟುಂಬದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಚಂದ್ರು ಹಂಚಿಕೊಂಡರು.  ಇತ್ತೀಚೆಗಷ್ಟೆ ತಾಯಿಯನ್ನು ಕಳೆದುಕೊಂಡ ತಮಗೆ ಮೊಮ್ಮಗಳು ಅಹನಾಳೇ ‘ತಾಯಿ’ ಮಗಳಿಲ್ಲದ ಮನೆಗೆ ಸೊಸೆಯೇ ಮಗಳು ಎನ್ನುವ ಮೂಲಕ ತಮ್ಮ ವಿಶಾಲ ಹೃದಯವನ್ನು ಮುಖ್ಯಮಂತ್ರಿ ಚಂದ್ರು ತೆರೆದಿಟ್ಟರು     ಜೊತೆಗೆ ಇದೇ 31ರಿಂದ 6 ದಿನಗಳ ಕಾಲ ಕಲಾ ಗಂಗೋತ್ರಿ ತಂಡದ 49ನೇ ವರ್ಷದ ಸಂಭ್ರಮಾಚರಣೆಯ ಬಗ್ಗೆ ‘ಮುಖ್ಯಮಂತ್ರಿ’ ನಾಟಕದ 700ನೇ ಪ್ರದರ್ಶನದ ಬಗ್ಗೆ ತಿಳಿಸುವುದನ್ನು ಮರೆಯಲಿಲ್ಲ.