ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ

 ಬೆಂಗಳೂರು,  ನ 5:   ಅಪರೇಷನ್ ಕಮಲ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಆಡಿಯೋ ಸೋರಿಕೆಯಾದ ವಿಷಯ  ರಾಜ್ಯರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿದ ಕಾರಣ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ತಮ್ಮ ಭೇಟಿಗೆ ಬರುವವರಿಗೆ ಮೊಬೈಲ್ ನಿಷೇಧ ಹೇರಿದ್ದಾರೆ. ತಮ್ಮ ಭೇಟಿಗೆ ಬರುವ ಪಕ್ಷದ  ಕಾರ್ಯಕರ್ತರು ಮತ್ತು ಮುಖಂಡರು ಮೊಬೈಲ್ ತರದಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.  ಭೇಟಿ ಬರುವವರ ಮೊಬೈಲ್ ತಪಾಸಣೆಗೂ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ಯಡಿಯೂರಪ್ಪ ಸೂಚನೆ  ಹಿನ್ನೆಲೆ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಮೊಬೈಲ್ ನಿಷೇಧದ ಬಗ್ಗೆ ಬೋರ್ಡ್  ಹಾಕಲಾಗಿದೆ. ಇತ್ತೀಚೆಗೆ ಯಡಿಯೂರಪ್ಪ ಬಿಜೆಪಿ ಮುಖಂಡರು ಹಾಗೂ  ಕಾರ್ಯಕರ್ತರ ಜತೆ ಸಭೆ ನಡೆಸುತ್ತಿದ್ದ ವೇಳೆ ಅನರ್ಹ ಶಾಸಕರ ಅಪರೇಷನ್ ಕಮಲದ ಬಗ್ಗೆ  ಮಾತನಾಡಿದ್ದ ಆಡಿಯೋ ಬಹಿರಂಗ ಆಗಿತ್ತು. ಮೈತ್ರಿ ಸರ್ಕಾರದ ಪತನಕ್ಕೆ ಅಮಿತ್ ಷಾ ಅವರ  ಒಪ್ಪಿಗೆ ಇತ್ತು. ಅವರ ನೇರ ಉಸ್ತುವಾರಿಯಲ್ಲೇ ಅನರ್ಹ ಶಾಸಕರು ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದರು, ಮತ್ತು ಅವರಿಗೆ ಮುಂಬೈಯಲ್ಲಿ ಸೂಕ್ತ ಭದ್ರತೆಯನ್ನು ಅವರೇ  ಒದಗಿಸಿದ್ದರು ಎಂದು ಯಡಿಯೂರಪ್ಪ ಅಲ್ಲಿ ಹೇಳಿರುವುದು ವಿಡಿಯೋದಲ್ಲಿ ಬಹಿರಂಗಗೊಂಡಿತ್ತು.   ಈ ವಿಷಯವನ್ನು ಮುಂದಿಟ್ಟು ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ನಡೆಸಿ  ರಾಜ್ಯಪಾಲರಿಗೂ ದೂರು ನೀಡಿದೆ. ಸುಪ್ರೀಂಕೋರ್ಟ್ಗ್ ಈ ಆಡಿಯೋವನ್ನು ಕಾಂಗ್ರೆಸ್  ಸಲ್ಲಿಸಿದೆ. ಅಲ್ಲದೇ ರಾಷ್ಟ್ರಪತಿಗಳಿಗೂ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.  ಆಡಿಯೋ  ವಿಚಾರವನ್ನು ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಈ ಎಲ್ಲಾ    ಹಿನ್ನೆಲೆಯಲ್ಲಿ ಇನ್ನುಮುಂದೆ ಇಂತಹ ಎಡವಟ್ಟುಗಳಾಗದಂತೆ ಯಡಿಯೂರಪ್ಪ  ಎಚ್ಚೆತ್ತುಕೊಂಡಿದ್ದು, ತಮ್ಮ ಭೇಟಿಗೆ ಬರುವಾಗ ಯಾರೂ ಮೊಬೈಲ್ ತಾರದಂತೆ ಸೂಚಿಸಿದ್ದಾರೆ.