ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನದ ಪ್ರತೀಕ

ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನದ ಪ್ರತೀಕ Chhatrapati Shivaji Maharaj is a symbol of self-respect.

ಗದಗ  19:  ಛತ್ರಪತಿ ಶಿವಾಜಿ ಮಹಾರಾಜರು ಎಂದರೆ ಶಕ್ತಿಯ ಸಂಕೇತ ಹಾಗೂ ಸ್ವಾಭಿಮಾನದ ಪ್ರತೀಕ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಛತ್ರಪತಿ ಶಿವಾಜಿಯವರು ಅಪ್ಪಟ ದೇಶಪ್ರೇಮಿಯಾಗಿದ್ದರು. ದೇಶ ಕಂಡ ಸಂಘಟನಾಕಾರ.  ತಾಯಿ ಜೀಜಾಬಾಯಿಯ ಪ್ರೇರಣೆಯಿಂದ ಶಿವಾಜಿ ಮಹಾರಾಜರು ಸಂಸ್ಕಾರವಂತರಾಗಿ ಆದರ್ಶ ಜೀವನ ನಡೆಸಲು ಕಾರಣವಾಯಿತು.  ಜೀಜಾಬಾಯಿಯವರ ಸ್ವರಾಜ್ಯದ ಕನಸು ನನಸು ಮಾಡಿದ ಅಪ್ರತಿಮ ವೀರ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ  ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ  ತಿಳಿಸಿದರು.   

ಉಪನ್ಯಾಸಕರಾದ ಹಿರಿಯ ವಕೀಲರಾದ ಸುಧೀರಸಿಂಹ ಘೋರೆ​‍್ಡ ಅವರು ಮಾತನಾಡಿ ಶಿವಾಜಿಯವರ ತತ್ವಗಳು ಒಂದೇ ಸಮುದಾಯಕ್ಕೆ ಅಲ್ಲದೇ  ಎಲ್ಲ ಸಮುದಾಯಕ್ಕೆ ಸೀಮಿತವಾಗಿವೆ. ಕ್ರಿ.ಶ 1630 ರಲ್ಲಿ ಶಿವನೇರಿ ದುರ್ಗದಲ್ಲಿ ಶಿವಾಜಿ ಮಹಾರಾಜರ ಜನನವಾಗುತ್ತದೆ. ಪರಕೀಯರ ಆಳ್ವಿಕೆಯಲ್ಲಿ ಇರಬಾರದು ಎಂಬುದು  ಜೀಜಾಮಾತೆಯು ಬಯಕೆಯಾಗಿತ್ತು. ಶಿವಾಜಿ ಮಹಾರಾಜರು ತಮ್ಮ 13 ನೇ ವರ್ಷದಲ್ಲಿ ಸ್ವರಾಜ್ಯ ಸ್ಥಾಪನೆಯ ಕನಸು ಕಂಡು ಮಾವಳಿಯರ , ರೈತರು, ಗುಡ್ಡಗಾಡು ಜನರ ಸಂಘಟನೆಯೊಂದಿಗೆ ಮೊಘಲರ ವಶದಲ್ಲಿರುವ ಕೋಟೆಗಳನ್ನು  ವಶಪಡಿಸಿಕೊಂಡರು. ಇವರು ಸಮರ್ಥ ಆಡಳಿತಗಾರರಾಗಿದ್ದರು.  ಗೆರಿಲ್ಲಾ ಯುದ್ಧ ನೀತಿ ಅನುಸರಿಸುತ್ತಿದ್ದರು.  1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು 'ಛತ್ರಪತಿ' ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು  ಎಂದು ಶಿವಾಜಿ ಮಹಾರಾಜರ ಶೌರ್ಯ ಪರಾಕ್ರಮ ಸೇರಿದಂತೆ  ಜೀವನ ಸಾಧನೆ ಕುರಿತು ವಿವರಿಸಿದರು.  

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ ಕೆ.ಆರ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ. ಬಸವರಾಜ ಜಕ್ಕಲಿ, ಸುರೇಶ ಬೇಂದ್ರೆ, ಕೃಷ್ಣಾಜಿ ತುಕ್ಕಪ್ಪನವರ, ಮುರಿಗೆಪ್ಪ ಶೆಟ್ಟರ್, ಅಜಿತ ಘೋರೆ​‍್ಡ, ಯಲ್ಲಪ್ಪ ಬೇಂದ್ರೆ  ಸೇರಿದಂತೆ   ಸಮಾಜದ ಹಿರಿಯರು, ಮಹಿಳೆಯರು, ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ವೀರಣ್ಣ ಅಂಗಡಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.  ಕು. ಸ್ವರಸಿಂಧು ನೃತ್ಯ ಪ್ರದರ್ಶಿಸಿದರು.