ರಾಸಾಯನಿಕ ಸೋರಿಕೆ: 18 ಮಂದಿ ಕಾರ್ಮಿಕರು ಅಸ್ವಸ್ಥ

Chemical spill: 18 workers sick

ಕಾರವಾರ: ತಾಲ್ಲೂಕಿನ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರುಪ್'ಗೆ ಸೇರಿರುವ ಗ್ರಾಸಿಮ್ ಇಂಡಸ್ಟ್ರೀಸ್'ನ ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ಶನಿವಾರ ರಾಸಾಯನಿಕ ಸೋರಿಕೆಯಾಗಿ 18 ಮಂದಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

ಘಟಕದಲ್ಲಿ ಕಾರ್ಯನಿರ್ವಹಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ರಾಸಾಯನಿಕ ಸೋರಿಕೆ ಉಂಟಾಯಿತು. ಕಣ್ಣು ಉರಿ ಉಂಟಾಗಿ, ಉಸಿರಾಟ ಸಮಸ್ಯೆಯಿಂದ ಕೆಲವು ಕಾರ್ಮಿಕರು ಬಳಲಿದ್ದರು. ತಕ್ಷಣ ಅವರನ್ನು ಘಟಕದಿಂದ ಹೊರಕ್ಕೆ ಕರೆತರಲಾಯಿತು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದರು.

ಕ್ಲೋರಿನ್ ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡ ಕಾರ್ಮಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ' ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ತಿಳಿಸಿದರು.

ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಕಾಸ್ಟಿಕ್ ಸೋಡಾ, ಫಾಸ್ಫಾರಿಕ್ ಆ್ಯಸಿಡ್ ಸೇರಿದಂತೆ ಕ್ಲೋರಿನ್ ರಾಸಾಯನಿಕದಿಂದ ಹಲವು ಉತ್ಪನ್ನ ತಯಾರಿಸುತ್ತಿದೆ.

ಕಾರ್ಮಿಕರು ಅಸ್ವಸ್ಥಗೊಂಡ ವಿಷಯ ತಿಳಿದ ಬಿಣಗಾ ಗ್ರಾಮಸ್ಥರು ಕಂಪನಿಯ ಆವರಣದಲ್ಲಿ ಸೇರಿದರು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಕಂಪನಿಯು ನಿರ್ಲಕ್ಷವಹಿಸುತ್ತಿದೆ. ಕೆಲ ದಿನಗಳ ಹಿಂದಷ್ಟೆ ಕಂಪನಿಯಲ್ಲಿ ರಾಸಾಯನಿಕ ಸೋರಿಕೆಯಾಗಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಇನ್ನೂ ಎಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿದರು.