ರಾಸಾಯನಿಕ ಮಿಶ್ರಿತ ಕುಂಕುಮ, ಶ್ರೀಗಂಧ ನಿಷೇಧ: ಪೂಜಾರಿ

ಬೆಂಗಳೂರು, ಅ 31: ರಾಜ್ಯದ ದೇವಾಲಯಗಳಲ್ಲಿ ದೇಹಕ್ಕೆ ಮಾರಕವಾಗಿರುವ ಕಲಬೆರಕೆ ಕುಂಕುಮ ಮತ್ತು  ಶ್ರೀಗಂಧ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಘೋಷಿಸಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಮುಜರಾಯಿ ದೇವಾಲಯಗಳಲ್ಲಿ  ಮೊದಲ ಹಂತದಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ, ಶ್ರೀಗಂಧ ಬಳಕೆ ಮತ್ತು ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಕುಮ ಬಣ್ಣ ಹೆಚ್ಚಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಬಂದಿರುವ ದೂರುಗಳನ್ನು ಪರಿಗಣಿಸಿ ಕ್ರಮ ತೆಗದುಕೊಳ್ಳಲಾಗುತ್ತಿದೆ ಎಂದರು.

ಮುಜರಾಯಿ ದೇವಾಲಯಗಳಲ್ಲಿ ವಿಗ್ರಹ, ಚಿನ್ನ-ಬೆಳ್ಳಿ ಆಭರಣಗಳು ಕಳುವಾಗುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.