ಶಿಕ್ಷಣಕ್ಕಿಂತ ಸಂಸ್ಕಾರವೇ ಮುಖ್ಯ: ಸಚ್ಚಿದಾನಂದ ಮಹಾಸ್ವಾಮೀಜಿ

ಶಿಕ್ಷಣಕ್ಕಿಂತ ಸಂಸ್ಕಾರವೇ ಮುಖ್ಯ: ಸಚ್ಚಿದಾನಂದ ಮಹಾಸ್ವಾಮೀಜಿ  Character-building is more important than education: Sachidananda Mahaswamiji

ಯರಗಟ್ಟಿ, ಸೆ.1: ಆಧುನಿಕ ಜಗತ್ತಿನಲ್ಲಿ ಪ್ರತಿಷ್ಠೆಯ ಸಂಕೇತವಾಗಿರುವ ಅಧಿಕಾರ, ಅಂತಸ್ತು, ವಿದ್ಯೆ ಹಾಗೂ ಪದವಿಗಳಿಗಿಂತಲೂ ಸಂಸ್ಕಾರ ಅತ್ಯಗತ್ಯ ಎಂದು ಕಟಕೋಳ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮೀಜಿ ಹೇಳಿದರು.  

ಪಟ್ಟಣದ ಶ್ರೀ ಮಹಾಂತ ದುರದುಂಡೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಶಿವಾನುಭವ ಗೋಷ್ಠಿ ಹಾಗೂ ಗುಡಾಪುರದ ದಾನಮ್ಮದೇವಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  

ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ತಿಳಿಸಿಕೊಡಬೇಕು. ಸಂಸ್ಕಾರಯುತ ಬದುಕು ರೂಪಿಸುವಲ್ಲಿ ಕುಟುಂಬ ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿದ್ದ ಮುನವಳ್ಳಿಯ ಸೋಮಶೇಖರ ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ದಾನಮ್ಮದೇವಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.  

ಇದಕ್ಕೂ ಮುನ್ನ ಶ್ರೀ ಸಿ.ಎಂ. ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ದಾನಮ್ಮದೇವಿಯ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು.  

ಬಸವಾದಿ ಶಿವಶರಣರ ಸಮಕಾಲೀನರಾಗಿದ್ದ ದಾನಮ್ಮದೇವಿ, ಅಕ್ಕಮಹಾದೇವಿಯ ನಂತರ ಹೆಚ್ಚಿನ ಜನಾನುಯಾಯಿಗಳನ್ನು ಹೊಂದಿದ್ದ ಶರಣೆಯಾಗಿದ್ದರು. ಇತರ ಶರಣರಂತೆ ವಚನ ರಚನೆಯಲ್ಲಿ ತೊಡಗದೆ, ಅನುಭವ ಮಂಟಪದಲ್ಲಿ ತಾವು ಪಡೆದ ಜ್ಞಾನವನ್ನು ಜನಮಾನಸದಲ್ಲಿ ಪಡಿಮೂಡಿಸುವ ಮಹತ್ವದ ಕಾರ್ಯ ಮಾಡಿದ್ದರು. ಲಿಂಗನಿಷ್ಠೆ, ಜಂಗಮ ಪ್ರೇಮ, ದಾನ, ಧರ್ಮ ಹಾಗೂ ನೊಂದವರು ಮತ್ತು ಅಸಹಾಯಕರ ಸೇವೆಗೆ ತಮ್ಮ ತನು-ಮನಗಳನ್ನು ಸಮರ​‍್ಿಸಿಕೊಂಡಿದ್ದರು ಎಂದು ವಿವರಿಸಿದರು.  

ಶಾಂತಿ, ನೆಮ್ಮದಿಯುತ ಬದುಕಿಗೆ ದಾನಮ್ಮದೇವಿಯ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.  ಅಶೋಕ ಹಾದಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಮಾದೇವಿ ಪೂರ್ವಿಮಠ, ದುಂಡಯ್ಯ ಹಿರೇಮಠ, ಗೂಳಪ್ಪ ಗಾಣಿಗೇರ, ಬಸವರಾಜ ಕುರುಬೆಟ, ಶಿವಾನಂದ ಪಟ್ಟಣಶೆಟ್ಟಿ, ರಾಜೇಂದ್ರ ವಾಳಿ, ಅಶೋಕ ಗಾಣಿಗ ಹಾಗೂ ಶಾರದಾ ಹೊಸೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಸದಾನಂದ ಹಣಬರ ನಿರೂಪಿಸಿದರು. ವಿಜಯಕಾಂತ ಮರಡಿ ಸ್ವಾಗತಿಸಿದರು. ಉಮಾದೇವಿ ಪೂರ್ವಿಮಠ ವಂದಿಸಿದರು.