ಬೆಂಗಳೂರು, ಸೆ 7 ಜಗತ್ತಿನ ಯಾರೂ ಪ್ರವೇಶಿಸದ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ತಲುಪುವ ಕ್ಷಣಕ್ಕಾಗಿ ಕಾಯುತ್ತಿದ್ದ ಪೀಣ್ಯದ ಇಸ್ರೋ ಕೇಂದ್ರದಲ್ಲಿ ಮನೆ ಮಾಡಿದ್ದ ಸಂಭ್ರಮ ಕ್ಷಣಾರ್ಧದಲ್ಲಿ ಮರೆಯಾಯಿತು. ಚಂದ್ರಯಾನ 2 ಯೋಜನೆಯ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯಲು ಆರಂಭಿಸುತ್ತಿದ್ದ ಕೇಂದ್ರದಲ್ಲಿ ನೆರೆದಿದ್ದ ವಿಜ್ಞಾನಿಗಳು, ವಿದ್ಯಾರ್ಥಿಯೋಗಳು ಮತ್ತಿತರರ ಗಣ್ಯರಲ್ಲಿ ಸಂತಸ ಮನೆ ಮಾಡಿತ್ತು. ಲ್ಯಾಂಡರ್ ನ ಪ್ರತಿ ಚಲನವಲನವನ್ನೂ ಕೂಲಂಕಶವಾಗಿ ಗಮನಿಸುತ್ತಿದ್ದ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಶನಿವಾರ ಮುಂಜಾನೆ 1.20ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದರು. 1.39ಕ್ಕೆ ಯೋಜನೆಯಂತೆ ಲ್ಯಾಂಡರ್ ನಿಧಾನವಾಗಿ ತನ್ನ ವೇಗವನ್ನು ಕಡಿತಗೊಳಿಸಿಕೊಳ್ಳುತ್ತಾ ಕೆಳಗಿಳಿಯಲಾರಂಭಿಸಿತು. ಇದನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ ವಿಜ್ಞಾನಿಗಳು ಕ್ಷಣ ಕ್ಷಣಕ್ಕೂ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 1.42ಕ್ಕೆ ಕಠಿಣ ಮಾರ್ಗವನ್ನು ಪೂರ್ಣಗೊಳಿಸಿ ಲ್ಯಾಂಡರ್ ಕೆಳಗಿಳಿದಾಗ ಮತ್ತೊಂದು ಹರ್ಷದ್ಘಾರ ಕೇಳಿಬಂದಿತ್ತು. ಅಲ್ಲಿಂದ ಪ್ರತಿ ಸೆಕೆಂಡ್ ಗೆ 60 ಕಿಮೀ ವೇಗದಲ್ಲಿ ಕೆಳಗಿಳಿಯಲಾರಂಭಿಸಿದ್ದ ಲ್ಯಾಂಡರ್ , ಮೇಲ್ಮೈಗೆ 100 ಮೀಟರ್ ಅಂತರವಿರುವಾಗಲೇ ಶೂನ್ಯ ವೇಗಕ್ಕಿಳಿಯುವ ಗುರಿ ಹೊಂದಿತ್ತು. ಈ ಎಲ್ಲಾ ಹಂತಗಳ ಯಶಸ್ಸಿನ ಸಂಭ್ರಮಕ್ಕೆ ವಿಜ್ಞಾನಿಗಳು ಸಾಕ್ಷಿಯಾದರು. ಆದರೆ, 1.52ಕ್ಕೆ ಪ್ರತಿ ಸೆಕೆಂಡ್ ಗೆ 40 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಲ್ಯಾಂಡರ್ ಮೇಲ್ಮೈಗೆ 2.1 ಕಿಮೀ ಅಂತರವಿರುವಾಗಲೇ ವೇಗೋತ್ಕರ್ಷ ಕಳೆದುಕೊಂಡು, ಭೂಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿತು. ಇದನ್ನು ವೀಕ್ಷಿಸುತ್ತಿದ್ದ ವಿಜ್ಞಾನಗಳ ಮುಖದಲ್ಲಿ ಏಕಾಏಕಿ ದಟ್ಟ ಕಾರ್ಮೊಡ ಕವಿಯಿತು. ಲ್ಯಾಂಡರ್ ನ ಪಥ ತೋರಿಸುತ್ತಿದ್ದ ಟ್ರಾಜೆಕ್ಟರಿ ತನ್ನ ನಿಗದಿತ ರೇಖೆ ಬಿಟ್ಟು ಹೊರಬಂದಾಗ ವಿಜ್ಞಾನಿಗಳು ಆತಂಕಕ್ಕೊಳಗಾದರು. ನಗೆ ತುಂಬಿದ್ದ ಮುಖಗಳು ಕಳಾಹೀನವಾದವು. ಪ್ರತಿಯೊಬ್ಬರೂ ಏನಾಗಿರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದರು. ಕೆಲ ನಿಮಿಷಗಳ ನಂತರ ಕಳಾಹೀನ ಮುಖದೊಂದಿಗೆ ಪ್ರಧಾನಿ ಮೋದಿ ಕುಳಿತಿದ್ದಲ್ಲಿಗೆ ತೆರಳಿದ ಇಸ್ರೋ ಅಧ್ಯಕ್ಷ ಕೆ.ಶಿವನ್, ಅವರೊಂದಿಗೆ ಪರಿಸ್ಥಿತಿಯನ್ನು ವಿವರಿಸಿದರು. ಅವರೊಂದಿಗಿದ್ದ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಹಾಗೂ ರಾಧಾಕೃಷ್ಣನ್ ಮೋದಿ ಅವರಿಗೆ ವಿವರ ನೀಡಿದರು. ಇವರ ಮಾತುಗಳನ್ನು ತಾಳ್ಮೆಯಿಂದಲೇ ಆಲಿಸಿದ ಮೋದಿ, ಮತ್ತೆ ಕೆಲ ಕಾಲ ಕಾಯುವುದಾಗಿ ಸಹ್ನೆ ಮಾಡಿದರು. ಆದರೆ, ಅವರ ಮುಖಭಾವ ಕೂಡ ಯಾವುದೋ ಮಹತ್ತರ ಸಮಸ್ಯೆಯ ಸೂಚನೆ ನೀಡುವಂತಿತ್ತು. ವಿಜ್ಞಾನಿಗಳಿಗೆ ಮೋದಿ ಧೈರ್ಯ ತುಂಬಿದರಾದರೂ, ಅವರ ನಿರಾಸೆಯನ್ನು ಕಡಿಮೆಗೊಳಿಸಲಿಲ್ಲ. ನಂತರ, ಇಸ್ರೋ ಅಧ್ಯಕ್ಷ ಕೆ. ಶಿವನ್, ಲ್ಯಾಂಡರ್ ನಿಂದ ಸಂಪರ್ಕ ಕಡಿತಗೊಂಡಿದೆ ಎಂದು ಘೋಷಿಸುವಾಗ ಅವರ ಧ್ವನಿಯಲ್ಲಿ ನೋವು ಕಾಣಿಸುತ್ತಿತ್ತು. ಸುಮಾರು 13 ನಿಮಿಷಗಳ ಸಂಭ್ರಮ ಕ್ಷಣಾರ್ಧದಲ್ಲಿ ಮಾಯವಾಗಿತ್ತು. ಚಪ್ಪಾಳೆಯ ಸದ್ದಿನ ಜಾಗದಲ್ಲಿ ಮೌನ ಮನೆಮಾಡಿತ್ತು. ಒಟ್ಟಿನಲ್ಲಿ ಚಂದ್ರಯಾನ -2 ಯೋಜನೆಯ ಆತಂಕಕಾರಿ ಹಾಗೂ ಮಹತ್ವದ 15 ಕ್ಷಣಗಳು ನೆರೆದವರಲ್ಲಿ ಎಲ್ಲಾ ಭಾವಗಳನ್ನು ಮೇಳೈಸಿ, ನೋವು ನಿರಾಸೆಯಲ್ಲಿ ಕೊನೆಗೊಂಡಿತು.