ಮಾದರಿ ಸಿಇಒ ಕಾರ್ಯಕ್ರಮ ಜಾರಿಗೆ ತಂದ ಪ್ರಿಯಾಂಗ ;
ಸಿಇಒ ಆಗಿ ಅಧಿಕಾರ ಸ್ವೀಕರಿಸಿ, ಕಾರ್ಯನಿರ್ವಹಣೆ ಮಾಡಿದ ಶಾಲಿನಾ ಶಾಯರ್ ಸಿದ್ದಿ
ಕಾರವಾರ,ಜ.29: ರಾಷ್ಟ್ರೀಯಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಜಿ.ಪಂ.ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳ ಪೈಕಿ ಹಳಿಯಾಳದ ಕ್ರೀಡಾಪಟು ಶಾಲಿನಾ ಶಾಯರ್ ಸಿದ್ದಿ ಅವರಿಗೆ ಒಂದು ದಿನ ಜಿ.ಪಂ.ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಅಚಾನಕ್ ಆಗಿ ದಕ್ಕಿತು. ಇದು ಯುವತಿಯರಲ್ಲಿ ಆತ್ಮವಿಶ್ವಾಸ ಹಾಗೂ ದೃಢತೆಯನ್ನು ತುಂಬಲು ಸಹಾಯವಾಯಿತು.
ಐಎಎಸ್ ಅಧಿಕಾರಿ, ಕಾರವಾರ ಜಿ.ಪಂ.ಸಿಇಒ ಪ್ರಿಯಾಂಗ ಅವರು ಈ ಅವಕಾಶವನ್ನು ಸಿದ್ದಿ ಸಮುದಾಯದ ಯುವತಿಗೆ ಕಲ್ಪಿಸಿದರು. ಪ್ರಿಯಾಂಗ ಅವರು ತಮ್ಮ ಕಾರ್ಯನಿರ್ವಹಣೆಯ ಚೇರ್ ಮೇಲೆ ಶಾಲಿನಾ ಸಿದ್ದಿಯನ್ನು ಕುಳ್ಳಿರಿಸಿ, ಜಿ.ಪಂ.ಕಾರ್ಯನಿರ್ವಹಣೆಯನ್ನು ಕಲಿಸಿದರು. ಯುವತಿಯಲ್ಲಿ ಆತ್ಮಸ್ಥೈರ್ಯತುಂಬುವ ಕೆಲಸ ಮಾಡಿದರು. ಹಾಗೂ ಪ್ರತಿ ವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ, ಜಿ.ಪಂ.ಕಾರ್ಯನಿರ್ವಹಣೆ ಹೇಳಿಕೊಡುವುದಾಗಿ ಪ್ರಕಟಿಸಿದರು. ಇದು ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ಪ್ರಕ್ರಿಯೆ ಎಂದರು. ಪುರುಷರಿಗಿಂತ ಮಹಿಳೆಯರು ಕಡಿಮೆಯಲ್ಲ. ಅವರು ಎಲ್ಲಾ ರೀತಿಯಿಂದ ಸಮಾನರು. ಜಾತಿ ಮತ್ತು ಲಿಂಗಕ್ಕಿಂತ ಮನುಷ್ಯತ್ವ ,ಪ್ರತಿಭೆ ಹಾಗೂ ಕಾರ್ಯಕ್ಷಮತೆ ಮುಖ್ಯ. ಆತ್ಮವಿಶ್ವಾಸ ತುಂಬುವ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರು ಜಿ.ಪಂ.ನ ವಿವಿಧ ಶಾಖೆಗಳಿಗೆ ಕರೆದೊಯ್ದು ಮಹಿಳೆಯರು ಹೇಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ತೋರಿಸಲಾಯಿತು. ಕಲಿಕೆ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಅಕ್ಷರಶಃ ಸಿಇಒ ವಿದ್ಯಾರ್ಥಿನಿಯರಿಗೆ ವಿವರಿಸಿದರು. ಈ ಮೂಲಕ ಅವರು ಯುವತಿಯರ ಮನಗೆದ್ದರು.
................