‘ಸಬ್ ಕ ಸಾಥ್’, ‘ಸಬ್ ಕ ವಿಕಾಸ್’ ‘ಸಬ್ ಕ ಲಕ್ಷ್ಯ’ ನೀತಿಯ ಕೇಂದ್ರ ಬಜೆಟ್ ಸ್ವಾಗತಾರ್ಹ- ನಳಿನ್ ಕುಮಾರ್ ಕಟೀಲ್

Nalin Kumar Katil

ಬೆಂಗಳೂರು, ಫೆ 1- ‘ಸಬ್ ಕ ಸಾಥ್’, ‘ಸಬ್ ಕ ವಿಕಾಸ್’ ‘ಸಬ್ ಕ ಲಕ್ಷ್ಯ’ ನೀತಿಯಂತೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಶನಿವಾರ ಕೇಂದ್ರ ಬಜೆಟ್ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.  

ಲೋಕಸಭೆಯಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ದೂರದೃಷ್ಟಿಯ, ಎಲ್ಲರ ಅಭಿವೃದ್ಧಿಯನ್ನು ಒಳಗೊಂಡ, ಎಲ್ಲ ವಲಯಗಳ ಸರ್ವತೋಮುಖ ಅಭಿವೃದ್ಧಿಗೆ ರೂಪಿಸಲಾದ ಬಜೆಟ್ ಆಗಿದೆ. ಕೃಷಿ, ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ವಲಯಗಳಿಗೆ ಅಗತ್ಯ ಅನುದಾನ ಒದಗಿಸಿರುವುದರಿಂದ ದೇಶ ಮತ್ತಷ್ಟು ಅಭಿವೃದ್ಧಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲ.  ಕೃಷಿಕರು, ಮಹಿಳೆಯರು, ದಿವ್ಯಾಂಗರ ಸೇರಿದಂತೆ ಎಲ್ಲರ ಕಲ್ಯಾಣಕ್ಕೆ ಬಜೆಟ್‍ನಲ್ಲಿ ಅಗತ್ಯ ಅನುದಾನ ಒದಗಿಸಲಾಗಿದೆ. ಆರ್ಥಿಕ ಸುಧಾರಣೆಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿಮೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಮಧ್ಯಮ ವರ್ಗದ ಜನರು ನಿರಾಳರಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.  

ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳಿಗೂ ವಿಶೇಷ ಒತ್ತು ನೀಡಲಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಯೋಜನೆಯನ್ನು 2023ರ ವೇಳೆಗೆ ಪೂರ್ಣಗೊಳಿಸಲಾಗುವುದು. ಬೆಂಗಳೂರು ಹೊರವಲಯದಲ್ಲಿ 18,600 ಕೋಟಿ ರೂ.ವೆಚ್ಚದಲ್ಲಿ 148 ಕಿ.ಮೀ ಉದ್ದದ ಸಬರ್ಬನ್ ರೈಲು ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರದಿಂದ ಶೇ 60ರಷ್ಟು ಅನುದಾನ ಒದಗಿಸುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.