ಬೆಳಗಾವಿ 29: ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಹಾಗೂ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಪೋಲಿಸ್ ಮಹಾನಿರ್ದೇಶಕರ ಆದೇಶದಂತೆ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ದಿ. 27ರಂದು 14 ಜನ ಸಜಾ ಬಂದಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ. ಕೃಷ್ಣಮೂರ್ತಿ 14 ಜನ ಸಜಾ ಬಂದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು. ಸದರಿ ಶಿಕ್ಷಾ ಬಂದಿಗಳ ಕಾರಾಗೃಹದಲ್ಲಿ ಉತ್ತಮ ಕೆಲಸ ಮತ್ತು ಉತ್ತಮ ನಡವಳಿಕೆಯನ್ನು ಪರಿಗಣಿಸಿ 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಸಜಾ ಬಂದಿಗಳ ಬಿಡುಗಡೆ ಕಡತಗಳನ್ನು ಕಾರಾಗೃಹದ ಸ್ಥಾಯಿ ಸಲಹಾ ಮಂಡಳಿಯ ಶಿಪಾರಸ್ಸಿನಂತೆ ಸರ್ಕಾರ ಹಾಗೂ ಪ್ರಧಾನ ಕಛೇರಿ ಬೆಂಗಳೂರಿಗೆ ಕಳುಹಿಸಲಾಗಿತ್ತು.
ಬಿಡುಗಡೆ ಹೊಂದುತ್ತಿರುವ ಸಜಾ ಬಂದಿಗಳನ್ನು ಉದ್ದೇಶಿಸಿ. ವಿ. ಕೃಷ್ಣಮೂರ್ತಿ ಮಾತನಾಡಿ ಕಳೆದ 12-13 ವರ್ಷಗಳಿಂದ ಈ ಸಂಸ್ಥೆಯ ವಿವಿಧ ವಿಭಾಗಗಳಾದ ಮರಗೆಲಸ, ಟೇಲರಿಂಗ, ನೇಯ್ಗೆ ವಿಭಾಗ, ಗಾರ್ಮೆಂಟ್ಸ ವಿಭಾಗ, ಕಿಚನ್ ವಿಭಾಗ ಒಳತೋಟ ಹಾಗೂ ಹೊರ ತೋಟಗಳಲ್ಲಿ ಉತ್ತಮ ರೀತಿಯಲ್ಲಿ ತಮಗೆ ವಹಿಸಿದ ಕೆಲಸವನ್ನ ನಿರ್ವಹಿಸಿದ್ದು, ಈಗ ಕರ್ನಾಟಕ ಸರ್ಕಾರವು ತಮ್ಮನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದು ಬಿಡುಗಡೆ ನಂತರ ಸಮಾಜದಲ್ಲಿ ಒಮ್ಮೆ ಮಾಡಿದ ತಪ್ಪನ್ನು ಮರಳಿ ಮಾಡದೇ ಸತ್ಪ್ರಜೆಗಳಾಗಿ ಬಾಳಬೇಕು. ಇಷ್ಟು ವರ್ಷ ಕುಟುಂಬಸ್ಥರಿಂದ ದೂರವಿದ್ದು ಈಗ ಅವರೊಂದಿಗೆ ಪ್ರೀತಿಯಿಂದ ಬಾಳಬೇಕು. ಸನ್ನಡತೆಯಿಂದ ಬಿಡುಗಡೆಗೊಂಡ ತಾವು ಸಮಾಜದಲ್ಲಿ ಉತ್ತಮ ನಡತೆಯಿಂದ ಬಾಳಿ ಇತರರಿಗೆ ಮಾದರಿಯಾಗಬೇಕು. ಹಾಗೂ ಶಾಂತಿ ಅಹಿಂಸೆ, ಸಮನ್ವಯತೆ ಬಗ್ಗೆ ಇತರರಿಗೆ ತಿಳಿಸಬೇಕು. ತಮ್ಮ ಮುಂದಿನ ಜೀವನ ಸಂತೋಷದಿಂದ ಕಳೆಯಿರಿ, ದೇವರು ತಮಗೆಲ್ಲ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊನ್ನೂರ, ಜೈಲರಗಳಾದ ರಾಜೇಶ ಧರ್ಮಟ್ಟಿ ಹಾಗೂ ರಮೇಶ ಕಾಂಬಳೆ ಉಪಸ್ಥಿತರಿದ್ದರು.