ನವದೆಹಲಿ, ಏ ೧೨, ಲಾಕ್ ಡೌನ್ ಕುರಿತು ಕೇಂದ್ರ ಸರ್ಕಾರ ಭಾನುವಾರ ಅಧಿಕೃತ ಘೋಷಣೆ ಮಾಡಲಿದೆ. ಲಾಕ್ ಡೌನ್ ಏಪ್ರಿಲ್ ೩೦ರವರೆಗೆ ವಿಸ್ತರಿಸಲು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ನಿನ್ನೆಯೇ ನಿಶ್ಚಯಗೊಳಿಸಲಾಗಿತ್ತು. ಆದರೆ, ಭಾನುವಾರ ಇದನ್ನು ಅಧಿಕೃತವಾಗಿ ಘೋಷಿಸಲಿದೆ. ಬಹುತೇಕ ರಾಜ್ಯಗಳು ಲಾಕ್ ಡೌನ್ ಮುಂದುವರಿಸಬೇಕು ಎಂದು ಸಲಹೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಅಧಿಕೃತವಾಗಿ ಪ್ರಕಟಿಸಲಿದೆ.
ಲಾಕ್ ಡೌನ್ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ರೆಡ್, ಆರೆಂಜ್, ಗ್ರೀನ್ ವಲಯಗಳನ್ನಾಗಿ ಪ್ರಾಂತ್ಯಗಳನ್ನು ವಿಭಜಿಸಲಿದ್ದು. ರೆಡ್ ವಲಯಗಳಲ್ಲಿ ಪೂರ್ಣ ಪ್ರಮಾಣದ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ. ಆರೆಂಜ್ ವಲಯದಲ್ಲಿ ಸೀಮಿತ ನಿರ್ಬಂಧಗಳು ಮುಂದುವರಿಯಲಿವೆ. ಗ್ರೀನ್ ವಲಯದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಎಚ್ಚರಿಕೆ ನೀಡಿ, ಸಮುದಾಯದಲ್ಲಿ ಪ್ರಸರಣಗೊಳ್ಳುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಗತ್ಯ ವಸ್ತುಗಳು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟಮಾಡುವವರ ಬಗ್ಗೆ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಚನೆ ನೀಡಿದ್ದರು. ಜನರ ಜೀವ ಹಾಗೂ ಜೀವನ ರಕ್ಷಿಸುವುದು ಅತ್ಯಂತ ಮುಖ್ಯವಾಗಿದ್ದು, ದೇಶದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮೋದಿ ಸಂವಾದದ ವೇಳೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.