ಡಿಜೆ ಬದಲು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗಣೇಶೋತ್ಸವ ಆಚರಿಸಿ: ಸಿಪಿಐ ಬ್ಯಾಕೂಡ್
Celebrate Ganeshotsav with traditional instruments instead of DJs: CPI Bakood
ಮೂಡಲಗಿ 09: ಡಿಜೆ ಅಬ್ಬರದಲ್ಲಿ ಯುವಕರು ದಾರಿ ತಪ್ಪದಂತೆ, ಮದ್ಯಪಾನ ಹಾಗೂ ಅಸಭ್ಯ ವರ್ತನೆಗೆ ಕಡಿವಾಣ ಹಾಕಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗಣೇಶೋತ್ಸವವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ್ ಕರೆ ನೀಡಿದರು. ಮಂಗಳವಾರ ಮೂಡಲಗಿ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಯ ಸಂಕೇತವಾಗಿದೆ. ಹಬ್ಬದ ಸಂದರ್ಭದಲ್ಲಿ ಡಿಜೆ ಸಂಗೀತದ ಅಬ್ಬರ, ಮದ್ಯಪಾನ ಹಾಗೂ ಅಶಿಸ್ತಿನ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಡಿಜೆ ಬದಲಿಗೆ ಡೊಳ್ಳು, ತಮಟೆ, ನಾಸಿಕ್ ಬ್ಯಾಂಡ್ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳನ್ನು ಬಳಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕು ಎಂದರು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯುವಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀಶೈಲ ಗುಡುಮೆ ಮಾತನಾಡಿ, ಪಟಾಕಿ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಶಬ್ದ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಆದ್ಯತೆ ನೀಡಬೇಕು ಎಂದರು. ಹೆಸ್ಕಾಂ ಇಲಾಖೆಯ ಪರಶುರಾಮ ಚವ್ಹಾಣ ಮಾತನಾಡಿ, ಗಣೇಶ ಮಂಟಪಗಳಿಗೆ ಅನುಮತಿ ಪಡೆದು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಬೇಕು. ವಿದ್ಯುತ್ ತಂತಿಗಳಿಂದ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಪಿಎಸ್‌ಐ ಯಮನಪ್ಪ ಬಿಸನಾಳ, ಕುಲಗೋಡ ಪಿಎಸ್‌ಐ ಆನಂದ ಬಿ, ಪುರಸಭೆ ಅಧಿಕಾರಿಗಳು, ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಮುಖಂಡರು, ಹಿರಿಯ ನಾಗರಿಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 