ಒಡಿಶಾದಲ್ಲಿ ಕೊವಿಡ್‍-19 ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: ಸೂರತ್‍ ನಿಂದ ಬಂದ 20 ಜನರಿಗೆ ಸೋಂಕು ದೃಢ

ಭುವನೇಶ್ವರ, ಮೇ 7,ಸೂರತ್‍ ನಿಂದ ವಾಪಸ್ಸಾದ ಇನ್ನೂ 20 ಮಂದಿಯಲ್ಲಿ ಕೊರೊನವೈರಸ್‍ ಸೋಂಕು ದೃಢಪಡುವುದರೊಂದಿಗೆ ಒಡಿಶಾದಲ್ಲಿ ಕೊವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 205ಕ್ಕೆ ಏರಿದೆ.ಸೂರತ್‍ ನಿಂದ ವಾಪಸ್ಸಾದ 20 ಜನರ ಪೈಕಿ 17 ಮಂದಿ ಗಂಜಾಂ ಜಿಲ್ಲೆಯವರಾಗಿದ್ದರೆ, ಮೂವರು ಮಯೂರ್‍ ಬಂಜ್‍‍ ಗೆ ಸೇರಿದವರಾಗಿದ್ದಾರೆ.  ಗಂಜಾಂ ಜಿಲ್ಲೆಯೊಂದರಲ್ಲೇ 21 ಪ್ರಕರಣಗಳು ದೃಢಪಟ್ಟಿದ್ದು, ಇವರೆಲ್ಲಾ ಸೂರತ್‍ ನಿಂದ ವಾಪಸ್ಸಾದವರಾಗಿದ್ದಾರೆ. ಸೂರತ್‍ ನಿಂದ ರಾಜ್ಯಕ್ಕೆ 25,000 ಮಂದಿ ವಾಪಸ್‍ ಆಗಿದ್ದು, ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಗಂಜಾಂ ಜಿಲ್ಲೆಗೆ ವಾಪಸ್ಸಾಗಲು ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಜ್ಯಸರ್ಕಾರದ ಪೊರ್ಟಲ್‍ ನಲ್ಲಿ ನೋಂದಣಿ ಮಾಡಿಸಿದ್ದಾರೆ. ವಿಶೇಷ ರೈಲುಗಳ ಮೂಲಕ ಸೂರತ್‍ ನಿಂದ ರಾಜ್ಯಕ್ಕೆ ಪ್ರತಿದಿನ ಸಾವಿರಾರು ವಲಸೆ ಕಾರ್ಮಿಕರು ವಾಪಸ್ಸಾಗುತ್ತಿದ್ದಾರೆ.
ಕೊವಿಡ್‍-19 ಮುಕ್ತ ಜಿಲ್ಲೆಯಾಗಿದ್ದ ಮಯೂರ್‍ ಬಂಜ್‍ ನಲ್ಲಿ ಮೂರು ಪ್ರಕರಣಗಳು ದೃಢಪಟ್ಟಿವೆ. ಈ ಮೂರು ಪ್ರಕರಣಗಳು ಸೂರತ್‍ ನಿಂದ ಬಂದವರಾಗಿದ್ದಾರೆ. ಒಡಿಶಾದ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳು ಇದೀಗ ಕೊರೊನವೈರಸ್‍ ಭೀತಿಯಲ್ಲಿವೆ. ಸೂರತ್‍ನಿಂದ ವಾಪಸ್ಸಾಗಿರುವವರನ್ನು 14 ದಿನಗಳ ಕ್ವಾರಂಟೈನ್‍ ನಲ್ಲಿ ಇರಿಸಲಾಗಿದ್ದು, ದೃಢಪಟ್ಟ ಎಲ್ಲ ಪ್ರಕರಣಗಳು ಇದೇ ಕ್ವಾರಂಟೈನ್‍ ಕೇಂದ್ರಗಳಿಂದ ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.