ಗದಗದಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣ: ಆಕ್ರೋಶ

ಗದಗದಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣ: ಆಕ್ರೋಶ Case of attack on government employees in Gadag: Outrage

ಲೋಕದರ್ಶನ ವರದಿ 

 ಗದಗ   17: ಚಿಕ್ಕಹಂದಿಗೋಳ ಗ್ರಾಮ ಪಂಚಾಯತ ಪಿಡಿಒ ಶಶಿಧರ ಕಪ್ಪರದ ಹಾಗೂ ವಾಟರ್‌ಮನ್ ಅರ್ಜುನ್ ಓಲೇಕಾರ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಅವರಿಗೆ ಮನವಿ ಸಲ್ಲಿಸಿದರು.

ಚಿಕ್ಕಹಂದಿಗೋಳ ಗ್ರಾಮ ಪಂಚಾಯತ ಪಿಡಿಒ ಶಶಿಧರ ಕಪ್ಪರದ ಹಾಗೂ ವಾಟರ್‌ಮನ್ ಅರ್ಜುನ್ ಓಲೇಕಾರ ಅವರು ಜೂ. 16ರಂದು ತಮ್ಮ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದುಂದೂರ ಗ್ರಾಮದ ಗಂಗಯ್ಯ ಗಣಾಚಾರಿ ಹಾಗೂ ಇತರರು ಮಾರಣಾಂತಿಕ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಹಾಗೂ ದುಃಖಕರ ಸಂಗತಿಯಾಗಿದೆ ಎಂದು ಅಳಲು ತೋಡಿಕೊಂಡರು.

ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದು ಕಾನೂನುಬಾಹಿರ ಕೃತ್ಯವಾಗಿದ್ದು, ಇದು ಸರ್ಕಾರಿ ಸೇವೆಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಗಂಭೀರ ಅಪರಾಧವಾಗಿದೆ. ದಿನನಿತ್ಯ ಸಾರ್ವಜನಿಕರೊಂದಿಗೆ ಅತಿ ಹೆಚ್ಚು ಸಂಪರ್ಕವಿರುವಂತಹ ಇಲಾಖೆಯಾದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯಲ್ಲಿ ಇಂತಹ ಘಟನೆಗಳಿಂದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭಯದ ವಾತಾವರಣ ಉಂಟಾಗಿದ್ದು, ಸಾರ್ವಜನಿಕ ಸೇವೆಗಳ ಮೇಲೂ ಪ್ರತಿಕೂಲ ಪರಿಣಾಮ ಬಿರುತ್ತಿದೆ.

ಆದ್ದರಿಂದ, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ ತಪ್ಪಿತಸ್ಥ ವ್ಯಕ್ತಿಗಳ ಮೇಲೆ ಎಫ್‌ಐಆರ್ ದಾಖಲಿಸಿ ತಕ್ಷಣ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು. ಜೊತೆಗೆ ಸರಕಾರಿ ನೌಕರರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಮೇಲೆ ಸೂಕ್ತ ರಕ್ಷಣೆ ಒದಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಮಾಜಿ ಅಧ್ಯಕ್ಷ ಡಾ. ರವಿ ಎಲ್‌. ಗುಂಜೀಕರ, ಡಿ.ಎಸ್‌. ತಳವಾರ, ಎಂ.ಎಂ. ನಿಟ್ಟಾಲಿ, ಎಂ.ವೈ. ಮಲಕಶೆಟ್ಟಿ, ರಾಜು ಕಂಟಿಗೊಣ್ಣವರ, ಸಿದ್ದಪ್ಪ ಲಿಂಗದಾಳ, ಎಸ್‌.ಎಸ್‌. ಪಾರ್ವತಿಮಠ, ಶಿವಪ್ಪ ಹದ್ಲಿ ಸೇರಿ ಮತ್ತಿತರರು ಇದ್ದರು.