ಮಳೆನೀರು ಕೊಯ್ಲಿಗೆ ಒತ್ತು ನೀಡಲು ಕರೆ

ಮಳೆನೀರು ಕೊಯ್ಲಿಗೆ ಒತ್ತು ನೀಡಲು ಕರೆ  Call to emphasize rainwater harvesting

ಲೋಕದರ್ಶನ ವರದಿ 

ಧಾರವಾಡ ಆ.28: ಜಲಮೂಲಗಳ ಸಂರಕ್ಷಣೆ ಹಾಗೂ ಮಣ್ಣು ಮತ್ತು ಮಳೆನೀರು ಕೊಯ್ಲಿನ ಕುರಿತು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಆ.27ರಂದು ಕಲಬುರಗಿಯ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.  

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಬಿ.ಎಂ. ದೊಡ್ಡಮನಿ, ಇಂದಿನ ಸಂದರ್ಭದಲ್ಲಿ ಮಳೆನೀರು ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು ಮಳೆನೀರಿನ ಮಹತ್ವ ಅರಿತು, ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.  

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ಗೀರೀಶ್ ಎನ್‌. ಮರಡ್ಡಿ ಮಾತನಾಡಿ, ಮಣ್ಣು ಸಸ್ಯಗಳ ಬೆಳವಣಿಗೆಗೆ ಹಾಗೂ ಆರೋಗ್ಯಕರ ಆಹಾರ ಉತ್ಪಾದನೆಗೆ ಅತ್ಯಗತ್ಯ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.  

ಸಹ ಪ್ರಾಧ್ಯಾಪಕ ಇಂಜಿನಿಯರ್ ಮಲ್ಲಿಕಾರ್ಜುನ ಅವರು ಮಳೆನೀರು ಕೊಯ್ಲು ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಭಾಗದ ಮುಖ್ಯಸ್ಥ ಡಾ. ಪಂಡಿತ ರಾಠೋಡ, ಡಾ. ರಾಚಪ್ಪ ವಿ. ಹಾವೇರಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.