ನವದೆಹಲಿ, ಆಗಸ್ಟ್ 5 ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಸೋಮವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ. ಪ್ರಧಾನಮಂತ್ರಿಯವರ ಮನೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲವಾದರೂ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರ,ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರ ಸ್ಥಾನಮಾನವನ್ನು ವಾಪಸ್ ಪಡೆಯುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಇದರ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಲಿದ್ದಾರೆ ಎಂದೂ ವರದಿಯಾಗಿದೆ. ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಲೋಕಸಭೆಯಲ್ಲಿ ಶಾ ಅವರು ಪ್ರತ್ಯೇಕವಾಗಿ ಹೇಳಿಕೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಸಭೆಯಲ್ಲಿ ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ , ಕಾಶ್ಮೀರ ಕಣಿವೆಯಲ್ಲಿ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಬಹಳ ಬಿಗುವಿನ ಪರಿಸ್ಥಿತಿ ನಿಮರ್ಾಣವಾಗಿದ್ದು ಎಲ್ಲ ಕಡೆ ಸೇನೆ ನಿಯೋಜನೆ ಮಾಡಲಾಗಿದೆ, ಇದರ ಜೊತೆಗೆ ಒಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಸೇರಿದಂತೆ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದ್ದು ಅಲ್ಲಿ ಒಂದು ರೀತಿ ಅಘೋಷಿತ ತುರ್ತ ಪರಿಸ್ಥಿತಿ ಮನೆ ಮಾಡಿದೆ.