ಅಮರಾವತಿ, ಜ 27 ‘ವಿಧಾನ ಪರಿಷತ್ತನ್ನು ರದ್ದುಗೊಳಿಸುವ’ ಪ್ರಸ್ತಾಪವನ್ನು ಅಂಗೀಕರಿಸುವ ಮೂಲಕ ಸೋಮವಾರ ಸಭೆ ಸೇರಿದ್ದ ಆಂಧ್ರಪ್ರದೇಶ ಸಚಿವ ಸಂಪುಟ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಸಮಗ್ರ ಚರ್ಚೆಯ ನಂತರ ವಿಧಾನ ಪರಿಷತ್ ಅನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.ಈ ಕುರಿತಂತೆ, ಹಣಕಾಸು ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನಾ ರಾಜೇಂದ್ರನಾಥ ರೆಡ್ಡಿ ಅವರು ಇಂದು ವಿಧಾನಸಭೆಯಲ್ಲಿ ಚರ್ಚೆಗಾಗಿ ನಿರ್ಣಯವನ್ನು ಮಂಡಿಸಲಿದ್ದಾರೆ. ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದ ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಪರಿಷತ್ ಅನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಅಂಗೀಕರಿಸುವಾಗ ಕಾನೂನು ಮತ್ತು ರಾಜಕೀಯ ಪರಿಣಾಮಗಳ ಬಗ್ಗೆ ಸಚಿವ ಸಂಪುಟ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.ಜ 20 ರಂದು ವಿಧಾನಸಭೆಯು ಅಂಗೀಕರಿಸಿದ ಮೂರು ರಾಜಧಾನಿಗಳ ಸ್ಥಾಪನೆಯ ಮಸೂದೆಯನ್ನು ಆಂಧ್ರ ವಿಧಾನ ಪರಿಷತ್ತು ಅಂಗೀಕರಿಸದಿರುವುದನ್ನು ಎಂದು ಇಲ್ಲಿ ಗಮನಿಸಬಹುದು. ಪರಿಷತ್ ಸಭಾಪತಿ ಷರೀಫ್ ಮೊಹಮ್ಮದ್ ಅಹ್ಮದ್ ಅವರು ಜ 21 ರಂದು ಮಸೂದೆಯನ್ನು ‘ಆಯ್ಕೆ ಸಮಿತಿ’ಗೆ ಕಳುಹಿಸಿದ್ದರು. 58 ಸದಸ್ಯ ಬಲದ ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) 28 ಸದಸ್ಯರನ್ನು ಹೊಂದಿದ್ದರೆ, ವೈಎಸ್ ಆರ್ ಸಿಪಿ 9 ಸದಸ್ಯರನ್ನು ಹೊಂದಿದೆ. ಬಿಜೆಪಿಯ ಇಬ್ಬರು ಸದಸ್ಯರಿದ್ದರೆ, ಪಕ್ಷೇತರರ 3 ಹಾಗೂ ನಾಮನಿರ್ದೇಶಿತ 8 ಸದಸ್ಯರಿದ್ದಾರೆ.ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆ ಮತ್ತು ನಿರ್ಣಯಗಳನ್ನು ಪ್ರತಿಪಕ್ಷ ಟಿಡಿಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿರುವ ವಿಧಾನಪರಿಷತ್ ಅಂಗೀಕರಿಸುವುದಿಲ್ಲ ಎಂದು ಮನಗಂಡ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪರಿಷತ್ ಅನ್ನೇ ರದ್ದುಮಾಡುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.