ಚಿನ್ನ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: 9.3ಕೋಟಿ ಚಿನ್ನ ವಶ: ಏಳು ಜನರ ಬಂಧನ

ಚಿನ್ನ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: 9.3ಕೋಟಿ ಚಿನ್ನ ವಶ: ಏಳು ಜನರ ಬಂಧನ ಬೆಂಗಳೂರು, ಮಾ.19 (ಯುಎನ್ಐ) ಚಿನ್ನ ಕಳ್ಳಸಾಗಣೆ ಆರೋಪದಡಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಏಳು ಜನರನ್ನು ಬಂಧಿಸಿ, 4 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 9.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದ ಮಾಸ್ಟರ್ ಮೈಂಡ್ ಉಡುಪಿ ಮೂಲದ ನವೀನ್ ಚಂದ್ರ ಕಾಮತ್ ಸೇರಿ ಏಳು ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಸುಮಾರು 4 ಕೋಟಿ ರೂ. ಮೌಲ್ಯದ 9.3 ಕೆಜಿ ಚಿನ್ನ, 5.2 ಕೆಜಿ ಬೆಳ್ಳಿ ಮತ್ತು 84 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನವನ್ನು ದುಬೈ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗಿದ್ದು, ಮಂಗಳೂರು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಕಲಿ ವಿದೇಶಿ ಗುರುತುಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗೌಪ್ಯ ಮಾಹಿತಿ ಆಧಾರದ ಮೇಲೆ ಡಿಆರ್‌ಐ ಮಾರ್ಚ್ 11 ರಂದು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಸೈಯದ್ ಮುಹಮ್ಮದ್ ಮತ್ತು ಅಶೋಕ ಕೆಎಸ್ ಎಂಬುವವರನ್ನು ಬಂಧಿಸಿ, ಅವರ ಬಳಿಯಿದ್ದ 5.6 ಕೆಜಿ ಕಚ್ಚಾ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದರು. ಕಳ್ಳಸಾಗಣೆ ಮಾಡಿದ ಚಿನ್ನವನ್ನು ಕ್ಯಾಲಿಕೆಟ್‌ನಿಂದ ಮಂಗಳೂರಿಗೆ ಕಚ್ಚಾ ಚಿನ್ನದ ಬಾರ್ ಗಳ ರೂಪದಲ್ಲಿ ತರುತ್ತಿದ್ದ ಆಪರೇಟಿವ್‌ಗಳ ಜಾಲದ ಬಗ್ಗೆ ನಿರ್ದಿಷ್ಟ ಮಾಹಿತಿ ದೊರಕಿತ್ತು. ನಕಲಿ ವಿದೇಶಿ ಗುರುತುಗಳೊಂದಿಗೆ ಚಿನ್ನವನ್ನು 100 ಗ್ರಾಂ ಬಾರ್‌ಗಳ ರೂಪದಲ್ಲಿ ಸಾಗಿಸುತ್ತಿದ್ದ ತಂಡ ರಾಜ್ಯದ ವಿವಿಧ ಸ್ಥಳಗಳಲ್ಲಿ ನಿಷಿದ್ಧ ಚಿನ್ನವನ್ನು ಮಾರಾಟ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಡಿಆರ್‌ಐ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಸ್ಥಳದಿಂದ ಮಂಜುನಾಥ್ ಶೇಟ್ ಅಲಿಯಾಸ್ ರೂಪೇಶ್ ಎಂಬ ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದ್ದು ಅವರು ಕಳ್ಳಸಾಗಣೆ ಮಾಡಿದ ಚಿನ್ನವನ್ನು ಪ್ರಯಾಣಿಕರಿಂದ ಸ್ವೀಕರಿಸಬೇಕಾಗಿತ್ತು ಎಂದು ಅಧಿಕಾರಿ ಹೇಳಿದರು. ಆತನ ಬಂಧನದ ನಂತರ ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗ ಮೂರು ಬೇರೆ ಬೇರೆ ಪ್ರದೇಶಗಳಲ್ಲಿ ಶೋಧ ಕೈಗೊಳ್ಳಲಾಗಿದೆ. ಚಿನ್ನವು ಕ್ಯಾಲಿಕಟ್ ನ ಕೆಲ ಅಕ್ಕಸಾಲಿಗರು ಮತ್ತು ಆಭರಣ ವ್ಯಾಪಾರಿಗಳಿಂದ ಬಂದಿದೆ ಎಂದು ತಿಳಿದುಬಂದಿದೆ.