ಬೆಂಗಳೂರು, ಫೆ. 5, ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ನನ್ನ ಮನೆ ಬಾಗಿಲ ಮುಂದೆ ಕಾಯುತ್ತಿದ್ದವರು. ಅವರ ರಾಜಕೀಯ ಆರಂಭವಾಗಿದ್ದೇ ನನ್ನ ಮನೆಯಿಂದ" ಇದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಏಕವಚನದಲ್ಲೇ ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ. ಸಂಪುಟದಲ್ಲಿ ಸಿ.ಪಿ.ಯೋಗೇಶ್ವರ್‌ಗೂ ಸ್ಥಾನಮಾನ ವಿಚಾರವಾಗಿ ಕಿಡಿಕಾರಿದ ಶಿವಕುಮಾರ್, ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಯೋಗೇಶ್ವರ್ ಬಿಜೆಪಿಗೆ ಸದನದಲ್ಲಿ ದಾಖಲೆ ಸಹಿತ ಉತ್ತರಿಸಿ ತಿರುಗೇಟು ನೀಡುತ್ತೇನೆ ಎಂದರು.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನನ್ನ ಶುಭಾಕಾಂಕ್ಷಿ ಎಂದು ನಾನು ಹೇಳುವುದಿಲ್ಲವಾದರೂ ಆತ ನನ್ನ ಮನೆ ಮುಂದೆ ನಿಂತೇ ರಾಜಕೀಯ ಕಲಿತ ಎಂದು ಸೂಚ್ಯವಾಗಿ ಹೇಳಿದರು.ಬಿಜೆಪಿಯವರು ಸೋತವರಿಗಾದರೂ ಮಂತ್ರಿ ಮಾಡಲಿ, ಗೆದ್ದವರಿಗಾದರೂ ಮಂತ್ರಿ ಮಾಡಲಿ. ನಮ್ಮನ್ನು ಬಿಟ್ಟು ಹೋದ ಏಳು ಜನರು ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು, ಅವರ ನೋವು ಎಂತಹದು ಎನ್ನುವುದು ಗೊತ್ತಿದೆ. ಆಗಲಿ ಅವರಿಗೆಲ್ಲ ಒಳ್ಳೆಯದಾಗಲಿ ಎಂದು ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಕಲ್ಯಾಣ ಸಂಸ್ಥೆ ಯೋಜನೆಯಡಿ ಕೆಲವು ಮಠಮಾನ್ಯ ಸಂಸ್ಥೆಗಳಿಗೆ ದಾಸೋಹ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಸರ್ಕಾರ ಚೂಸ್ ಆಂಡ್ ಪಿಕ್ ಮಾಡುತ್ತಿದೆ. ದಾಸೋಹ ಸ್ಥಗಿತಗೊಳಿಸಿದ್ದು ಖಂಡನೀಯ.ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಆರ್‌ಎಸ್‌ಎಸ್‌ನ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಕೊಲ್ಲೂರು ದೇವಸ್ಥಾನದ ಹಣ ನೀಡುವುದನ್ನು ಸ್ಥಗಿತಗೊಳಿಸಿದ್ದನ್ನು ಬಿಜೆಪಿಯವರು ರಾಜಕಾರಣಕ್ಕಾಗಿ ದುರುದ್ದೇಶದಿಂದ ಬಳಸಿಕೊಂಡಿದ್ದರು. ಈಗ ಮಠ ಮಾನ್ಯಗಳ ದಾಸೋಹ ಸ್ಥಗಿತಗೊಳಿಸಿದ್ದಾರೆ. ಇದನ್ನೇ ಮುಂದುವರೆಸಿದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಜಾತಿ, ಧರ್ಮ ನೋಡಿ ಯೋಜನೆ ಜಾರಿಗೆ ತಂದಿರಲಿಲ್ಲ. ಈಗ ಮಠ ಮಾನ್ಯಗಳ ಬಗ್ಗೆ ಬಿಜೆಪಿಯವರ ಧೋರಣೆ ಏನು ಎನ್ನುವುದು ಜನರಿಗೆ ಅರ್ಥವಾಗುತ್ತಿದೆ ಎಂದು ಶಿವಕುಮಾರ್ ಕುಟುಕಿದರು.