ಬೆಂಗಳೂರು, ಮಾ. 13: ಮೇಲ್ಮನೆಯಲ್ಲಿ ಭ್ರಷ್ಟಾಚಾರ ಸದ್ದು ಮಾಡಿದ್ದು, ಸಂವಿಧಾನದ ಮೂರು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರು ವ್ಯವಸ್ಥೆಗಳಲ್ಲಿಯೂ ಭ್ರಷ್ಟಾಚಾರ ಹಾಸುಹೊಕ್ಕಿದೆ. ಹಣವಿಲ್ಲದೇ ಯಾವ ಕೆಲಸವೂ ನಡೆಯದೆಂಬ ಅಭಿಪ್ರಾಯವನ್ನು ಆಡಳಿತರೂಢ ಹಾಗೂ ಪ್ರತಿಪಕ್ಷಗಳ ಸದಸ್ಯರು ಪಕ್ಷಾತೀತವಾಗಿ ಒಪ್ಪಿಕೊಂಡರು.ಸದನ ಸಮಾವೇಶಗೊಂಡಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸಂವಿಧಾನದ ಮೇಲೆ ಚರ್ಚೆಯನ್ನು ಮುಂದುವರೆಸಿದರು. ಬಿಜೆಪಿಯ ಪ್ರಾಣೇಶ್ ಸಂವಿಧಾನದ ಮೇಲೆ ಮಾತನಾಡಿ, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದವನು. ಆರ್ ಎಸ್ ಎಸ್ ನ ಗರಡಿಯಲ್ಲಿ ಬೆಳೆದ ನಮಗೆ ಸಂಘದಲ್ಲಿ ಸಾಕಷ್ಟು ಶಿಸ್ತು ಕಲಿಸಿದ್ದಾರೆ. ದೇಶದ ಬಗ್ಗೆ , ಹಿರಿಯರ ಬಗ್ಗೆ ಗೌರವ ಬರುವಂತಹ ಪಾಠ ಕಲಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ನಮಗೆ ದೇಶವಿರೋಧಿ ಘೋಷಣೆ ಕೂಗುವವರ ಮೇಲೆ ಕೋಪ ಬರುತ್ತದೆ ಎಂದರು.ಅಂಬೇಡ್ಕರ್ ಉದ್ದೇಶ ತುಳಿತಕ್ಕೆ ಒಳಗಾದವವರಿಗೆ ನ್ಯಾಯ ಒದಗಿಸುವುದಾಗಿತ್ತು. ಆದರೆ ಅಂಬೇಡ್ಕರ್ ಅವರನ್ನು ಇಂದು ಒಂದು ಜನಾಂಗಕ್ಕೆ ಸೀಮಿತ ಮಾಡುವ ಪ್ರಯತ್ನ ನಡೆಯುತ್ತಿದೆ. ಅಂಬೇಡ್ಕರ್ ಅವರನ್ನು ರಾಜ್ಯಸಭೆ, ಅಥವಾ ಲೋಕಸಭೆಗೆ ಆಯ್ಕೆ ಮಾಡಬಹುದಾಗಿತ್ತು. ಆದರೆ ಅವರನ್ನು ಸೋಲಿಸಲಾಯಿತು. ಅವರ ಜ್ಞಾನ ಬಳಸಿಕೊಳ್ಳಬಹುದಾಗಿತ್ತು. ಸಂವಿಧಾನ ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಎಪ್ಪತ್ತು ಬಾರಿ ತಿದ್ದುಪಡಿ ಆಗಿದೆ. ಆಗ ಪ್ರಶ್ನೆ ಮಾಡದವರು, ಈಗ ವಿರೋಧ ಮಾಡುತ್ತಿರುವುದೇಕೆ ?ಎಂದು ಪ್ರಶ್ನಿಸಿದರು.ಸಾಮಾಜಿಕ ನ್ಯಾಯ ಕೊಡಿಸಬೇಕು ಎಂದು ಅಂಬೇಡ್ಕರ್ ಹೋರಾಟ ಮಾಡಿದರು. ಆದರೆ ನಾವು ಅದರಲ್ಲಿ ಎಷ್ಟು ಸಫಲರಾಗಿದ್ದೇವೆ.? ಅಂಬೇಡ್ಕರ್ ಆಶಯಗಳಿಗೆ ಎಲ್ಲಿ ನ್ಯಾಯ ಕೊಡಿಸಿದ್ದೇವೆ.? ಅಂಬೇಡ್ಕರ್ ಇದ್ದಾಗ ಬೆಲೆ ಕೊಡದೇ, ಅವರ ಮರಣದ ನಂತರ ಹಾಡಿ ಹೊಗಳಿದರೆ ಫಲವೇನು.? ಎಂದರು.ದೇಶ ವಿಭಜನೆ ಆದಾಗ ಪಾಕಿಸ್ತಾನದಲ್ಲಿ ಶೆ.27ರಷ್ಟು ಹಿಂದೂಗಳಿದ್ದರು. ಆದರೆ ಭಾರತದಲ್ಲಿ ಶೇ. 4ರಷ್ಟು ಮುಸ್ಲಿಮರಿದ್ದರು. ಆದರೆ ಈಗ ಕೇವಲ ಪ್ರತಿಶತ 2ರಷ್ಟು ಹಿಂದೂಗಳು ಮಾತ್ರ ಪಾಕ್ ನಲ್ಲಿ ಇದ್ದಾರೆ. ಹಾಗಾದರೆ ಉಳಿದವರು ಎಲ್ಲಿ ಹೋದರು. ಆ ಉಳಿದವರು ಬಂದರೆ, ಅವರಿಗೆ ಪೌರತ್ವ ಕೊಡಬೇಕೋ ಬೇಡವೋ.?. ಇಂದು ಆ ಕಾಯ್ದೆಯನ್ನು ವಿರೋಧಿಸುತ್ತಿರುವವರು ಈ ಬಗ್ಗೆ ಹೇಳಲಿ. ಭಾರತವನ್ನು ಗೌರವಿಸಲು ಸಂವಿಧಾನದಲ್ಲೇ ಹೇಳಿದೆ. ಭಾರತ ವಿರೋಧಿ ಘೋಷಣೆ ಕೂಗುವವರನ್ನು, ಕ್ರಿಕೆಟ್ ನಲ್ಲಿ ಭಾರತ ಗೆದ್ದಾಗ ಪಟಾಕಿ ಹೊಡೆಯುವವರನ್ನು ವಿರೋಧ ಮಾಡಿದರೆ ತಪ್ಪೇನು.?ಎಂದು ಪ್ರಶ್ನಿಸಿದರು.ಬಳಿಕ ಜೆಡಿಎಸ್ನ ಹಿರಿಯ ಶಾಸಕ ಬಸವರಾಜ್ ಹೊರಟ್ಟಿ ಮಾತನಾಡಿ, ಇಂದಿನ ಚುನಾವಣೆಗಳಲ್ಲಿ ಮತದಾರರು ಹಣ ಪಡೆದು ಮತ ಹಾಕುವುದೇ ಹೆಚ್ಚು. ಓದು ಬರಹ ತಿಳಿದವರೂ ಇದಕ್ಕೆ ಹೊರತಾಗಿಲ್ಲ ಎಂದರು.ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಒಂದು ಪೋಸ್ಟಲ್ ಓಟ್ ಹಾಕಲು ಐದಾರು ಸಾವಿರ ಹಣ ಕೇಳುತ್ತಾರೆ ಎಂದರು. ಯುಜಿಸಿ ಪೇ ಸ್ಕೇಲ್ ಇರುವವರೇ ಇಂತಹ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ರವಿಕುಮಾರ್ ಪ್ರಸ್ತಾಪಿಸಿದರು.ಹೌದು, ನೀವು ಬಂದು ಇನ್ನೂ ರೇಟ್ ಜಾಸ್ತಿ ಮಾಡಿದ್ದೀರಾ ಎಂದು ಜೆಡಿಎಸ್ ನ ಶ್ರೀಕಂಠೇಗೌಡ ಹೇಳಿದಾಗ ಚರ್ಚೆಯ ಸ್ವರೂಪವೇ ಬೇರೆ ರೂಪ ಪಡೆಯಿತು.ಚುನಾವಣೆ ಗೆಲ್ಲುವುದು ಹೇಗೆ? ಎಂಬ ವಿಷಯಕ್ಕೆ ಸಂಬಂಧಿಸಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರೆ ಹೇಗೆ?ಎಂದು ಸಚಿವ ಸಿ.ಟಿ.ರವಿ ಹೇಳಿದರು.ಸಂವಿಧಾನ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪ ಮಾಡಿದ ಬಿಜೆಪಿಯ ನಾರಾಯಣಸ್ವಾಮಿ,ಮತದಾರರು ಹಣ ನೀಡದಿದ್ದರೆ ಮತ ಹಾಕದ ಪರಿಸ್ಥಿತಿ ನಿರ್ಮಾಣ ಆಗಿದೆ. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಧ್ಯಾಹ್ನ ಮೂರು ಗಂಟೆಯಾದರೂ ಒಂದು ಮತಗಟ್ಟೆಯಲ್ಲಿ ಒಂದೂ ಮತ ಚಲಾವಣೆ ಆಗಿರಲಿಲ್ಲ. ಏಕೆ ಎಂದು ವಿಚಾರಿಸಿದಾಗ, ಇಬ್ಬರು ಅಭ್ಯರ್ಥಿಗಳು ಮಾತ್ರ ದುಡ್ಡು ಕೊಟ್ಟಿದ್ದಾರೆ. ಮೂರನೇ ಅಭ್ಯರ್ಥಿ ಎಷ್ಟು ಕೊಡುತ್ತಾರೆ ಎಂದು ನೋಡಿಕೊಂಡೇ ಮತ ಹಾಕುತ್ತಾರೆ ಎಂದು ಬಿಜೆಪಿಯ ನಾರಾಯಣ ಸ್ವಾಮಿ ಹೇಳಿದಾಗ, ಜೆಡಿಎಸ್ ನ ಶ್ರೀಕಂಠೇಗೌಡ ಅದಕ್ಕೆ ಧ್ವನಿಗೂಡಿಸಿ, 2004ರಲ್ಲಿ ನಾನು ಮೊದಲು ಚುನಾವಣೆ ಎದುರಿಸಿದಾಗ ಒಂದು ಪೈಸೆಯೂ ಖರ್ಚು ಮಾಡಲಿಲ್ಲ. ಆದರೆ 2016ರಲ್ಲಿ ಚುನಾವಣೆಗೆ 5 ಎಕರೆ ಜಮೀನನ್ನು ಮಾರಾಟ ಮಾಡಬೇಕಾಯಿತು ಎಂದರು.ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ವಿಧಾನ ಪರಿಷತ್ ಗೆ , ರಾಜ್ಯಸಭೆಗೆ ಆಯ್ಕೆ ಮಾಡಲು ಎಂ ಎಲ್ ಎ ಗಳು ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಫಿಕ್ಸ್ ಮಾಡಿಕೊಂಡಿದ್ದಾರೆ. ಸಂವಿಧಾನ ಕಾಪಾಡುವವರೂ ಸಹ ರೇಟ್ ಫಿಕ್ಸ್ ಮಾಡಿಕೊಂಡಿಲ್ಲವೇ? ಎಂದು ಚುರುಕು ಮುಟ್ಟಿಸಿದರು. ಮನಿ ಟ್ರಾನ್ಸ್ಯಾಕ್ಷನ್ ಒಂದೇ ಭ್ರಷ್ಟಾಚಾರವಲ್ಲ. ದುಡ್ಡೇ ತೆಗೆದುಕೊಳ್ಳಬೇಕು ಎನ್ನುವುದಲ್ಲ. ಹಣಕ್ಕೆ ಮಾತ್ರ ಭ್ರಷ್ಟಾಚಾರವನ್ನು ನಾವು ಮೀಸಲುಗೊಳಿಸಿದ್ದೇವೆ. ಮೌಲ್ಯಾಧಾರಿತ ರಾಜಕಾರಣವೇ ಇಲ್ಲ. ಎಲ್ಲರೂ ಹಿಪೋಕ್ರಸಿ ಆಗಿದ್ದೇವೆ ಎಂದರು. ಜೆಡಿಎಸ್ನ ಭೋಜೇಗೌಡ ಮಾತನಾಡಿ, ನ್ಯಾಯಾಂಗವೂ ಸೇರಿದಂತೆ ಎಲ್ಲವೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದಾಗ ಇದಕ್ಕೆ ಬಸವರಾಜ ಹೊರಟ್ಟಿ ಧ್ವನಿಗೂಡಿಸಿ, ದುಡ್ಡುಕೊಟ್ಟು ಆರಿಸಿ ಬಂದಿದ್ದೇವೆ ಎಂದು ನಾವು ಹೊರಗೆ ಹೇಳಿದರೆ ಪೊಲೀಸರು ನಮ್ಮನ್ನು ಬಂಧಿಸಬಹುದು. ಇದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ವಿಷಯ. ಕರ್ನಾಟಕದಲ್ಲಿ ದುಡ್ಡುಕೊಡದೇ ಕಡತ ಮುಂದು ಹೋಗುವುದೇ ಇಲ್ಲ. ಒಂದು ಕಡತ ಬಂತೆಂದರೆ ಅದನ್ನು ಬಲಿಹಾಕಲು ನೋಡುವವರೆ ಹೆಚ್ಚು. ದುಡ್ಡು ಕೊಡದೇ ಯಾವುದೇ ಕೆಲಸ ಆಗದು ಎಂದು ಎಲ್ಲರೂ ಹೇಳುವುದೇ ಆಗಿದೆ ಎಂದರು. ಮಧ್ಯಪ್ರವೇಶ ಮಾಡಿದ ಬಿಜೆಪಿಯ ನಾರಾಯಣಸ್ವಾಮಿ, ಮೊದಲು ಶುಕ್ರಾನ ಇತ್ತುಣ ನಂತರ ನಜರಾನಾ, ಆಮೇಲೆ ಹಕ್ರಾನಾ ಇದರ ಮುಂದುವರೆದಿದ್ದು ದಬರಾನಾ ಆಯಿತು. ಕಚೇರಿಗಳಲ್ಲಿ ಕಡತಕ್ಕೆ ದಬರಾನಾ ವ್ಯವಸ್ಥೆಯೇ ಇದೆ ಎಂದರು. ಮತ್ತೆ ಮಾತು ಮುಂದುವರೆಸಿದ ಹೊರಟ್ಟಿ, ಸೋತಂತಹ ವ್ಯಕ್ತಿ ಆರಿಸಿಬಂದಾಗ ಆತ ಮುಂದೇನು ಮಾಡುತ್ತಾನೆ? ಟೋಪಿ ಹಾಕುವ ವ್ಯವಸ್ಥೆ ಜಾರಿಯಾಗಿದೆ. ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರು ವ್ಯವಸ್ಥೆಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ನ್ಯಾಯಾಧೀಶರ ಬಗ್ಗೆ ಬಹಳ ಜನ ಮಾತನಾಡುವುದೇ ಇಲ್ಲ. ಆದರೆ ಸದನದಲ್ಲಿ ಈ ಬಗ್ಗೆ ಮಾತನಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು