ಸ್ನೇಹಿತನ ಜೊತೆಗೆ ತೆರಳಿದ್ದ ಯುವಕ ಶವವಾಗಿ ಪತ್ತೆ

ಮೈಸೂರು,ಮಾ.7,ಸ್ನೇಹಿತನೊಂದಿಗೆ ತೆರಳಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ  ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ  ಸೋನಹಳ್ಳಿ ಬಳಿ ನಡೆದಿದೆ. ತಗಡೂರು ಗ್ರಾಮದ ನಿವಾಸಿ ಮನೋಜ್ ಕುಮಾರ್,  ರಾಮಚಂದ್ರರಾವ್ ನಾಲೆಯ ತೂಬಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಮನೋಜ್ ಕುಮಾರ್ ಗುರುವಾರ ಸ್ನೇಹಿತ ವಿಜಯ್ ಕುಮಾರ್ ಜೊತೆ ತೆರಳಿದ್ದ. ಬಳಿಕ ಗೆಳೆಯರೆಲ್ಲರೂ ಸೇರಿ ರಾಮಚಂದ್ರರಾವ್ ನಾಲೆ ಬಳಿ ಪಾರ್ಟಿ ಮಾಡಿದ್ದರು. ಆದರೆ, ಆ ಪಾರ್ಟಿಯಲ್ಲಿ ಇಬ್ಬರು ಅಪರಿಚಿತರು ಸೇರಿಕೊಂಡಿದ್ದರು ಎನ್ನಲಾಗಿದೆ.ಈ ವೇಳೆ ಅಪರಿಚಿತರು ಹಾಗೂ ಮನೋಜ್ ಕುಮಾರ್ ನಡುವೆ ಜಗಳವಾಗಿ ಮಾತಿಗೆ ಮಾತು ಬೆಳೆದಿದೆ. ಈ ಜಗಳ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಹೊಡೆದಾಟ ಕೂಡ ಆಗಿತ್ತು. ಅಪರಿಚಿತರು ವಿಜಯ್ಕುಮಾರ್ ಬೈಕ್ನ್ನು ನಾಲೆಗೆ ತಳ್ಳಿದ್ದರು. ಆಗ ವಿಜಯ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದನು.ನಂತರ ಸ್ವಲ್ಪ ಸಮಯದ ನಂತರ ಹಿಂದಿರುಗಿ ಆತ ನಾಲೆ ಬಳಿ ಬಂದಾಗ ಮನೋಜ್ ಕುಮಾರ್ ಕೂಡ ನಾಪತ್ತೆಯಾಗಿದ್ದನು. ತಕ್ಷಣ ವೇ ಈ ವಿಷಯವನ್ನು  ವಿಜಯ್ ಕುಮಾರ್, ಮನೋಜ್ ಪೋಷಕರಿಗೆ  ತಿಳಿಸಿದ್ದನು ಎನ್ನಲಾಗಿದೆ.ಶುಕ್ರವಾರ ಮನೋಜ್ ಕುಮಾರ್ ಮೃತದೇಹ ಪತ್ತೆಯಾಗಿದ್ದು, ಮನೋಜ್ ಕಿವಿ, ಮರ್ಮಾಂಗ, ಹುಬ್ಬುಗಳ ಮೇಲೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮನೋಜ್ ಪೋಷಕರು ಇದು ಕೊಲೆ ಎಂದು ಆರೋಪಿಸಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ