ಯೂರೋಪ್ ನಲ್ಲಿ ಮೊದಲ ಕೊರೊನವೈರಸ್ ಸಾವು ಪ್ರಕರಣ ಫ್ರಾನ್ಸ್ ನಿಂದ ವರದಿ

ಪ್ಯಾರಿಸ್, ಫೆ 15 :    ಫ್ರಾನ್ಸ್ ಆಸ್ಪತ್ರೆಯಲ್ಲಿ 80 ವರ್ಷದ ಚೀನಾದ ಪ್ರವಾಸಿಯೊಬ್ಬ ಕೊರೊನಾವೈರಸ್‌ನಿಂದ ಮೃತಪಡುವುದರೊಂದಿಗೆ ಯೂರೋಪ್ ನಲ್ಲಿ ಮಾರಕ ಸೋಂಕಿನ ಮೊದಲ ಸಾವು ವರದಿಯಾಗಿದೆ ಎಂದು ಎಂದು ಫ್ರಾನ್ಸ್‌ ಆರೋಗ್ಯ ಸಚಿವ ಆಗ್ನೆಸ್ ಬುಜೈನ್ ಶನಿವಾರ ಖಚಿತಪಡಿಸಿದ್ದಾರೆ.  

ಉಸಿರಾಟದ ಕಾಯಿಲೆಯಾದ ಕೊರೊನವೈರಸ್ ಸೋಂಕು, ಮಾರಣಾಂತಿಕ ಕಾಯಿಲೆಯಾಗಿದೆ.  ಏಷ್ಯಾದ ಹೊರಗೆ ಇದನ್ನು ಅಧಿಕೃತವಾಗಿ ಕೋವಿದ್ -19 ಎಂದು ಕರೆಯಲಾಗುತ್ತದೆ.  

ಬಿಬಿಸಿ ಪ್ರಕಾರ, ಚೀನಾ ಪ್ರವಾಸಿ ಜ 16 ರಂದು ಫ್ರಾನ್ಸ್ ಗೆ ಆಗಮಿಸಿದ್ದಾನೆ. ತಪಾಸಣೆ ವೇಳೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಜ 25 ರಂದು ಪ್ಯಾರಿಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು.  

ಫ್ರಾನ್ಸ್ ನಲ್ಲಿ ಕೊರೊನ ವೈರಸ್ ನ 11 ಪ್ರಕರಣಗಳು ದೃಢಪಟ್ಟಿದ್ದು, ವಿಶ್ವದಾದ್ಯಂತ 66,000 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.  

ಚೀನಾದಲ್ಲಿ ಮಾರಕ ಸೋಂಕಿನಿಂದ ಸಾವಿನ ಸಂಖ್ಯೆ 1,500 ದಾಟಿದೆ. ಇವುಗಳಲ್ಲಿ ಹೆಚ್ಚಿನ ಸಾವು ಹುಬೈನ ವುಹಾನ್ ನಿಂದ ವರದಿಯಾಗಿದೆ. ಫಿಲಿಪೈನ್ಸ್, ಹಾಂಗ್ ಕಾಂಗ್ ಮತ್ತು ಜಪಾನ್ ಸೇರಿದಂತೆ ಚೀನಾದ ಮುಖ್ಯ ಭೂಭಾಗದ ಹೊರಗೆ ಕೊರೊನಾವೈರಸ್‌ ನ ಮೂರು ಸಾವು ಪ್ರಕರಣಗಳು ವರದಿಯಾಗಿವೆ.  

ಚೀನಾದಲ್ಲಿ ಹೊಸದಾಗಿ 2,641 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 66,492 ಕ್ಕೆ ತಲುಪಿದೆ.