ವಾಷಿಂಗ್ಟನ್, ಏ 5, ಕೊರೊನಾ ಸೋಂಕಿಗೆ ಬರುವ ವಾರ ಅನೇಕರು ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬರುವ ದಿನಗಳಲ್ಲಿ ಕೊರೊನಾ ಸೋಂಕಿನ ಹೆಚ್ಚಿನ ಸಾವು ಸಂಭವಿಸಲಿದೆ” ಎಂದಿದ್ದಾರೆ. ಸೋಂಕು ಹೆಚ್ಚು ವ್ಯಾಪಿಸಿರುವ ಪ್ರದೇಶಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಮಿಲಿಟರಿ ನೆರವು ನೀಡುವ ಬದ್ಧತೆಯನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ. ಜಾಗತಿಕವಾಗಿ ಅಮೆರಿಕದಲ್ಲಿಯೇ ಹೆಚ್ಚಿನ ಸಂಖ್ಯೆಯ ಜನರಲ್ಲಿ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿದೆ. ಜಾಗತಿಕವಾಗಿ ಸುಮಾರು ಹನ್ನೊಂದೂವರೆ ಲಕ್ಷ ಜನರಿಗೆ ಸೋಂಕು ತಗುಲಿದ್ದು ಈ ಪೈಕಿ 3,11,301 ಜನರು ಅಮೆರಿಕಕ್ಕೆ ಸೇರಿದವರಾಗಿದ್ದಾರೆ. ಈಸ್ಟರ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಟ್ರಂಪ್ ಹೇಳಿದ್ದು, ತಿಂಗಳುಗಟ್ಟಲೆ ಯಾವುದನ್ನೂ ಬಂದ್ ಮಾಡಲಾಗುವುದಿಲ್ಲ ಎಂದೂ ಹೇಳಿದ್ದಾರೆ.ಅಮೆರಿಕದಲ್ಲಿ ಕೊರೊನಾ ಸೋಂಕು ತಗುಲಿ 8000 ಜನರು ಮೃತಪಟ್ಟಿದ್ದು ಈ ಪೈಕಿ ನ್ಯೂಯಾರ್ಕ್ ನಲ್ಲಿ ಅತಿ ಹೆಚ್ಚು 3565 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.ಶನಿವಾರ, ನ್ಯೂಯಾರ್ಕ್ ನಲ್ಲಿ 630 ಜನರು ಸೋಂಕಿಗೆ ಬಲಿಯಾಗಿದ್ದು ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3565 ಕ್ಕೆ ತಲುಪಿದೆ.