ನವದೆಹಲಿ, ಮಾ 12 ದೇಶದಲ್ಲಿ ಕೊರೋನಾ ವೈರಾಣು ಹರಡುತ್ತಿರುವ ಆತಂಕದ ನಡುವೆಯೇ, ಕೇಂದ್ರ ಸರ್ಕಾರ ವೈರಾಣು ತಡೆಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಕೊರೋನಾ ವೈರಸ್ ಸೋಂಕನ್ನು ಸಾಮಾನ್ಯವೆಂಬಂತೆ ಪರಿಗಣಿಸುವ ಹಾಗಿಲ್ಲ. ಒಂದು ವೇಳೆ ಸೋಂಕು ವ್ಯಾಪಿಸಿದರೆ ಅದನ್ನು ತಡೆಗಟ್ಟಲು ಸರ್ಕಾರದ ಬಳಿ ಇರುವ ಸೌಲಭ್ಯಗಳೇನು? ಎಷ್ಟು ಆಸ್ಪತ್ರೆಗಳಲ್ಲಿ ವೈರಾಣು ಸೋಂಕಿತರಿಗಾಗಿ ಹಾಸಿಗೆಗಳನ್ನು ಮೀಸಲಾಗಿರಿಸಿದೆ ಎಂದು ಪಕ್ಷದ ಸಂವಹನ ಉಸ್ತುವಾರಿ ರಣದೀಪ್ ಸುರ್ಜೆವಾಲ ಪ್ರಶ್ನಿಸಿದ್ದಾರೆ. ಆಸ್ಪತ್ರೆಗಳು ಹಾಗೂ ಹಾಸಿಗೆಗಳ ಮಾತು ಒತ್ತೊಟ್ಟಿಗಿರಲಿ, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳೂ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೊರೋನಾ ವೈರಸ್ ಪರಿಣಾಮ ಷೇರು ಮಾರುಕಟ್ಟೆಯೂ ಅಲುಗಾಡುತ್ತಿದೆ.ರೂಪಾಯಿ ಮೌಲ್ಯ 74.4 ಪೈಸೆಗೆ ಕುಸಿದಿದೆ. ಸೆನ್ಸೆಕ್ಸ್ 2700 ಪಾಯಿಂಟ್ ಗೆ ಅಪ್ಪಳಿಸಿದ್ದು, 11 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಕೊರೋನಾ ವೈರಸ್ ವಿಚಾರವನ್ನು ಕೇಂದ್ರ ಸರ್ಕಾರ ಸಾಮಾನ್ಯವೆಂಬಂತೆ ಪರಿಗಣಿಸಿದೆ ಎಂದು ಟೀಕಿಸಿದ್ದಾರೆ. “ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ವೈರಸ್ ಸಾಂಕ್ರಾಮಿಕ ಎಂದು ಘೋಷಿಸಿದೆ. ಇಡೀ ಜಗತ್ತು ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸುತ್ತಿದೆ. ಷೇರು ಮಾರುಕಟ್ಟೆ ಅಲುಗಾಡುತ್ತಿದೆ. ಮತ್ತೊಂದೆಡೆ ದೆಹಲಿ ಹಿಂಸಾಚಾರದಿಂದ ಹಲವರು ಮನೆ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಎನ್ ಡಿಎ ಸರ್ಕಾರ ಏನೂ ಆಗಿಯೇ ಇಲ್ಲವೆಂಬಂತೆ ಮಗುಮ್ಮಾಗಿದೆ” ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.