ಹಿರೇಕೆರೂರಿನಲ್ಲಿ ನಾಳೆ ಮುಖ್ಯಮಂತ್ರಿಗೆ ಅಭಿನಂದನಾ ಸಮಾರಂಭ: 331 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಬೆಂಗಳೂರು, ಮಾ. 6, ಹಿರೇಕೆರೂರು ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾರ್ಚ್ 7ರಂದು ಕ್ಷೇತ್ರದಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಶನಿವಾರ ಬೆಳಿಗ್ಗೆ 11 ಗಂಟೆಗೆ ಹಿರೇಕೆರೂರಿನ ದೂದಿಹಳ್ಳಿಯಲ್ಲಿರುವ "ಕಿತ್ತೂರು ರಾಣಿ ಚೆನ್ನಮ್ಮ ಹಾಗೂ  ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನಾ  ಸಮಾರಂಭ ಆಯೋಜಿಸಲಾಗಿದೆ. ಅಂದು ಕ್ಷೇತ್ರದ ಒಟ್ಟು  330.94 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು  ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಬಿ.ಸಿ.ಪಾಟೀಲ್  ತಿಳಿಸಿದ್ದಾರೆ.

ತುಂಗಾ ಮೇಲ್ದಂಡೆ  ರಟ್ಟೀಹಳ್ಳಿ ನೀರಾವರಿ  ಇಲಾಖೆಯ ಯೋಜನೆಯಡಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ  ಸರ್ವಜ್ಞ ಏತ ನೀರಾವರಿ, ಸಮಾಜ ಕಲ್ಯಾಣ ಇಲಾಖೆಯ ರಟ್ಟೀಹಳ್ಳಿ ಗ್ರಾಮದ ಇಂದಿರಾಗಾಂಧಿ  ವಸತಿ ಶಾಲೆಯ ಸಮುಚ್ಛಯ ನಿರ್ಮಾಣ ಕಾಮಗಾರಿ ಶಿಲಾನ್ಯಾಸ, ಹಿರೇಕೆರೂರ ಪಟ್ಟಣದ ಬಸವೇಶ್ವರರ  ನಗರದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ  ಶಿಲಾನ್ಯಾಸ, ಪರಿಶಿಷ್ಟ ಜಾತಿಯ ಕಾಲೋನಿಗಳಿಗ ಹೈಮಾಸ್ಕ್ ದೀಪಗಳ ಅಳವಡಿಕೆ 40 ಗ್ರಾಮಗಳ  ಶಿಲಾನ್ಯಾಸ (ಪ್ರತಿ ಘಟಕಕ್ಕೆ 2.50 ಲಕ್ಷ ರಂತೆ), ಕೆ.ಆರ್.ಐ.ಇ.ಎಸ್ ದೂದಿಹಳ್ಳಿ ಗ್ರಾಮದ  ಸಮೀಪದಲ್ಲಿರುವ ಕಿತ್ತೂರ ಚನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ನೂತನ ಕಟ್ಟಡ  ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.