ಸಿಎಂ,ಡಿಸಿಎಂ ಅಹವಾಲು ಸ್ವೀಕಾರ-ಮನವಿಗಳ ಮಹಾಪೂರ

ಸಿಎಂ,ಡಿಸಿಎಂ ಅಹವಾಲು ಸ್ವೀಕಾರ-ಮನವಿಗಳ ಮಹಾಪೂರ CM, DCM receive report - Requests

ಆಲಮಟ್ಟಿ 09: ಕೃಷ್ಣೆಯ ಜಲಧಿಗೆ ಶನಿವಾರ ಗಂಗಾಪೂಜೆ ಹಾಗೂ ಬಾಗಿನ ಅರೆ​‍್ಣ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಭಾಗದ ಜನತೆಯ ಅಹವಾಲು ಸ್ವೀಕರಿಸುತ್ತಿದ್ದಂತೆ ಮನವಿಗಳ ಮಹಾಪೂರವೇ ಹರಿದುಬಂತು. 

ವಿವಿಧ ಸಂಘ,ಸಂಸ್ಥೆಯ ಮುಖಂಡರು ತಮ್ಮ ಪ್ರಮುಖ ಕಾರ್ಯಕರ್ತರೊಂದಿಗೆ ಆಲಮಟ್ಟಿಗೆ ಬೆಳಿಗ್ಗೆಯೇ ಆಗಮಿಸಿದರು. ಸಿಎಂ,ಡಿಸಿಎಂ ಬಾಗಿನ ಸಲ್ಲಿಸಿದ ಬಳಿಕ ಜನತೆಯ ಅಹವಾಲು ಸ್ವೀಕಾರಕ್ಕೆ ಮುಂದಾಗ ಹಲವಾರು ಸಂಘಟನೆಯ ಮುಖಂಡರು ಕೈಯಲ್ಲಿ ಮನವಿ ಪತ್ರಗಳನ್ನು ಹಿಡಿದುಕೊಂಡು ದೊರೆಗಳಿಗೆ ಸಲ್ಲಿಸಲು ಪೈಪೋಟಿ ನಡೆಸಿ ಹರಸಾಹಸ ಪಟ್ಟರು. ಈ ವೇಳೆ ಸಿಎಂ, ಡಿಸಿಎಂ ಸಮಾಧಾನ ಚಿತ್ತರಾಗಿ ಮನವಿಗಳನ್ನು ಸ್ವೀಕರಿಸಿದರು. 

*ಐಟಿಐ ಸಿಬ್ಬಂದಿಗಳ ಗೋಳು,ವೇತನಾನುದಾನಕ್ಕೆ ಮನವಿ :*  1997ರ ಪರಿಷ್ಕ್ರತ ವೇತನಾನುದಾನ ಸಂಹಿತೆಯಂತೆ 2018ರಲ್ಲಿ ಪೂರ್ವಭಾವಿ ಪರೀವೀಕ್ಷಣೆಯಾಗಿರುವ ಅನುದಾನರಹಿತ  ವೇತನಾನುದಾನ ಮಂಜೂರು ಮಾಡುವವಂತೆ ಸಿಎಂ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು. 

ಕಳೆದ ವರ್ಷ ಫೆ.8ರಂದು ವಿಧಾನಸೌಧದ ಮುಂಭಾಗದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವು. ತಾವು ನಮ್ಮ ಮನವಿಯನ್ನು ಶಾಂತಚಿತ್ತದಿಂದ ಆಲಿಸಿದ್ದೀರಿ. ಮುಂದೆ ಅದಕ್ಕೆ ಪ್ರತಿಯಾಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮಾನ್ಯ ಆಯುಕ್ತರಿಂದ ಬೇಡಿಕೆ ಸಮಂಜಸವಾಗಿರುವ ಬಗ್ಗೆ ಪತ್ರ ಬಂದಿದ್ದು ಸರ್ಕಾರ ಈಗಿರುವ ವಿದ್ಯಾರ್ಥಿ ಕೇಂದ್ರಿತ ಅನುದಾನ ಸಂಹಿತೆ ಹಿಂಪಡೆದು ವೇತನಾನುದಾನ ನೀಡಬಹುದೆಂದು ತಿಳಿಸಿರುತ್ತಾರೆ. ಅಲ್ಲದೇ 2018ರಲ್ಲಿ ಅಂದಿನ ಕೌಶಲ್ಯಾಭಿವೃದ್ಧಿ ಸಚಿವರು 456 ಐಟಿಐಗಳಿಗೆ 125 ಕೋಟಿ ರೂ. ಬಜೆಟ್ ನಿಗದಿಗೊಳಿಸಿ ಪ್ರಯತ್ನ ಪಟ್ಟಿದ್ದರು ಎಂದು ಸಿಎಂ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

2001 ರಿಂದ 2010 ರ ಅವಧಿಯಲ್ಲಿ ಖಾಸಗಿ ಐಟಿಐಗಳಿಗೆ ಅನುಮತಿ ನೀಡುವಾಗ ಇತರೆ ಶಾಲಾ ಕಾಲೇಜುಗಳಿಂದ ತಪ್ಪದೇ ಪಡೆಯುವ ಶಾಶ್ವತ ಅನುದಾನರಹಿತವಾಗಿ ನಡೆಸಬೇಕೆಂಬ ಶರತ್ತನ್ನು ಇಲಾಖೆ ವಿಧಿಸಿರುವದಿಲ್ಲ. ಇದಕ್ಕೆ ಕಾರಣ ಖಾಸಗಿ ಐಟಿಐಗಳು ಕನಿಷ್ಠ 7ವರ್ಷ ತರಬೇತಿ ನೀಡಿದರೆ ವೇತನ ಸಹಾಯಾನುದಾನ ನೀಡಲಾಗುವದೆಂದು 1997ರ ಸರ್ಕಾರದ ಆದೇಶವು ಜಾರಿಯಲ್ಲಿತ್ತು. ಹಾಗಾಗಿ ಸರ್ಕಾರದ ಆದೇಶ ನಂಬಿಕೊಂಡು ಸಂಘ, ಸಂಸ್ಥೆಗಳು ಐಟಿಐಗಳನ್ನು ಸ್ಥಾಪಿಸಿವೆ. ಆದರೆ 15-20ವರ್ಷವಾದರೂ ಅನುದಾನವಿಲ್ಲದೇ ಬಿಇ, ಡಿಪ್ಲೋಮಾ, ಎಟಿಎಸ್ ವಿದ್ಯೆಯ ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿಗಳು ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಈಗಾಗಲೇ 2000 ನೇ ಸ್ಥಾಪನೆಯಾಗಿರುವ 196 ಖಾಸಗಿ ಐಟಿಐಗಳು ರಾಜ್ಯ ಸರ್ಕಾರದ ವೇತನಾನುದಾನಕ್ಕೆ ಒಳಪಟ್ಟಿರುತ್ತವೆ. 

ಕಾರಣ ತಾವುಗಳು ನಾಡಿಗೆ ಹತ್ತು ಹಲವು ಭಾಗ್ಯಗಳನ್ನು ನೀಡಿ ಭಾಗ್ಯಗಳ ಸರದಾರ ಎಂಬ ಕೀರ್ತಿಗೆ ಪಾತ್ರರಾಗಿದ್ದೀರಿ. ಆದರೆ ನಮ್ಮ ಈ ಬೇಡಿಕೆಯನ್ನು ಕೂಡಲೇ ಮಂಜೂರು ಮಾಡಲು ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ. ದಶಕದಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಯುತವಾದ ಖಾಸಗಿ ಐಟಿಐಗಳ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದಿದ್ದಾರೆ ಪ್ರಮುಖರು. 

ಕೃಷಿ,ತೋಟಗಾರಿಕೆ ಬೆಳೆಹಾನಿ ಪರಿಹಾರ ನೀಡಿ :* ಪ್ರಸಕ್ತ ಸಾಲಿನ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಾಗೂ ಜಿಲ್ಲೆಯ ಸಮಗ್ರ ನೀರಾವರಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಕಿಸಾನ ಸಂಘದ ಕನಾ9ಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ ಮನವಿ ಸಲ್ಲಿಸಿದ್ದಾರೆ. 

ಈ ವರ್ಷದ ಮುಂಗಾರು ಅತಿವೃಷ್ಟಿ ಮಳೆಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಬಾಳೆ, ಲಿಂಬೆ, ತರಕಾರಿ, ಕಾಯಿಪಲ್ಯ ಬೆಳೆಗಳು ಹಾಗೂ ತೊಗರಿ, ಹತ್ತಿ, ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅವರಿಗೆ ತುರ್ತು ನೆರವು ನೀಡಬೇಕು ಎಂದಿದ್ದಾರೆ. 

 *ಮಂಗಾರು ಬೋಯ ಪರಿಕಾರ:* ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿ ಅತಿವೃಷ್ಠಿಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶವಾಗಿವೆ ಹಾಗೂ ನದಿಗಳಿಂದ. ಡೋಣೆಯಿಂದ ನೆರೆ ಬಂದು ಕೂಡಾ ಬೆಳೆ ಹಾಳಾಗಿವೆ. ತುರ್ತಾಗಿ ಜಿಲ್ಲೆಯ ಎಲ್ಲ ಪಂಚಾಯತಿಗಳನ್ನೊಳಗೊಂಡು ಸರಿಯಾಗಿ ಸರ್ವೆ ಮಾಡಿ ತಾರತಮ್ಯ ಮಾಡದೇ ಕನಿಷ್ಠ ಕೃಷಿ ಬೆಳೆಗಳಿಗೆ ಎಕರೆಗೆ 25 ರಿಂದ 40 ಸಾವಿರ ರೂಪಾಯಿಗಳವರೆಗೆ ಪರಿಹಾರ ನೀಡಬೇಕು ಹಾಗೂ ಕೋಟಗಾರಿಕಾ ಬೆಳೆಗಳಿಗೆ ಎಕರೆಗೆ 50 ಸಾವಿರದಿಂದ ರಿಂದ 1 ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಇರಿಸಿದ್ದಾರೆ. 

*ವಿಮೆ ಹಣ ಪಾವತಿ ಮಾಡುವುದು :* ಈ ಬಾರಿ ಮುಂಗಾರು ಹಂಗಾಮು ಅತಿವೃಷ್ಠಿಯಿಂದ ಕೃಷಿ ಬೆಳೆಗಳು ಹಾಗೂ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು, ಜಿಲ್ಲೆಯಾದ್ಯಂತ ವಿಮೆ ತುಂಬಿದ ರೈತರಿಗೆ ಎಲ್ಲಾ ಪಂಚಾಯತಿಗಳನ್ನೊಳಗೊಂಡು ವಿಮೆ ಕಂಪನಿಯಿಂದ ಹಾಗೂ ಅಧಿಕಾರಿಗಳಿಂದ ಸರ್ವೆ ಮಾಡಿಸಿ ತಾರತಮ್ಯ ಮಾಡದೇ ವಿಮೆ ತುಂಬಿದ ರೈತರಿಗೆ ಬೇಗನೆ ಹಣ ಬಿಡುಗಡೆಯಾಗಬೇಕು ಮತ್ತು ಅಫ್ಘಾನಿಸ್ಥಾನದಿಂದ ಭಾರತಕ್ಕೆ ಕಳ್ಳ ಮಾರುಕಟ್ಟೆ ಮೂಲಕ ಒಣದ್ರಾಕ್ಷಿ ಬರುತ್ತಿದೆ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂಬ ಮನವಿ ಮಾಡಿಕೊಂಡಿದ್ದಾರೆ. 

*ರೇವಣಸಿದ್ದೇಶ್ವರ ಏತನೀರಾವರಿ ಯೋಜನಾ ವರದಿಗೆ ಬೇಡಿಕೆ:* 

ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಫೇಸ್‌-2ರಲ್ಲಿ ಬರುವ ವಿಜಯಪುರ-ಚಡಚಣ ತಾಲೂಕಿನ (ನಾಗಠಾಣ ಮತಕ್ಷೇತ್ರ, ಬಬಲೇಶ್ವರ ಮತಕ್ಷೇತ್ರ) 19 ಹಳ್ಳಿಗಳು ಹಾಗೂ ಬಿಟ್ಟು ಹೋದ ಮಡಸನಾಳ, ದರ್ಗಾ ಎಲ್‌.ಟಿ., ದರ್ಗಾ, ಭಾವಿಕೋಟ ದೊಡ್ಡಿ, ಮೋನಪ್ಪನ ದೊಡ್ಡಿ, ತೊರವಿ ವಸ್ತಿ, ಘಂಟಿ ವಸ್ತಿ, 

ತೇಲಿ ವಸ್ತಿ, ಫಳಸಿ ವಸ್ತಿಗಳಿಗೆ (ಇವು ತಿಡಗುಂದಿ ಶಾಖಾ ಕಾಲುವೆ ಎಡಭಾಗಕ್ಕೆ ಬರುವ ಹಳ್ಳಿಗಳು) ಯಾವುದೇ ಯೋಜನೆಯಿಂದ ಅಥವಾ ಬೇರಾವುದೇ ಸ್ತ್ರೀಂನಿಂದ ಈ ಹಳ್ಳಿಗಳು ವಂಚಿತವಾಗಿದ್ದು, ನೀರಾವರಿ ಸೌಲಭ್ಯ ಕಲ್ಪಿಸಿಲ್ಲ. ಕಾರಣ 19 ಹಳ್ಳಿಗಳು ಹಾಗೂ ನೀರಾವರಿಯಿಂದ ವಂಚಿತವಾದ ತಿಡಗುಂದಿ ಶಾಖಾ ಕಾಲುವೆಯ ಮೇಲ್ಬಾಗ (ಎಡಭಾಗ) ಅಂದಾಜು 2500 ಹೆಕ್ಟೇರ ಪ್ರದೇಶವನ್ನು ಈ ನೀರಾವರಿಗೆ ಒಳಪಡಿಸಿ. ಒಟ್ಟಾರೆ 21730 ಹೆಕ್ಟೇರ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಬಹುದಾಗಿದ್ದು, ಸುಮಾರು 2.514 ಟಿ.ಎಂ.ಸಿ. ನೀರಿನ ಅವಶ್ಯಕತೆ ಇದ್ದು, ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಫೇಸ್‌-2ರಲ್ಲಿ ನೀರಾವರಿ ಒದಗಿಸಲು ಬಬಲೇಶ್ವರ ಮತಕ್ಷೇತ್ರದ 11720 ಹೆಕ್ಟೇರ ಪ್ರದೇಶವನ್ನು ಹಾಗೂ ನಾಗಠಾಣ ಮತಕ್ಷೇತ್ರದ 10010 ಹೆಕ್ಟೇರ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಫೇಸ್‌-2ಗೆ ಅವಶ್ಯವಿರುವ ನೀರಿನ ಹಂಚಿಕೆ, ವಿವರವಾದ ವಿಸ್ತ್ರತ ಯೋಜನಾ ವರದಿ ಹಾಗೂ ಅಂದಾಜು ಪತ್ರಿಕೆ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಅತ್ಯಗತ್ಯವಾಗಿದೆ. 

ಚಡಚಣ ಏತ ನೀರಾವರಿ ನೆನೆಗುದಿಗೆ ಬಿದ್ದಿದ್ದು, ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ತಿಡಗುಂದಿ ಶಾಖಾ ಕಾಲುವೆಯ ಜಮೀನುಗಳಿಗೆ ನೀರು ಹರಿಸಲು ಡಿಸ್ಟ್ರಿಬ್ಯೂಟರ್, ಲ್ಯಾಟರಲ್ (ಕಿರು ಕಾಲುವೆ) ಗಳನ್ನು ನಿರ್ಮಾಣ ಮಾಡಲು ಬೇಗನೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಡೋಣಿ ನದಿಯ ಹೂಳೆತ್ತಿ ಜಲಾನಯನ ಕಾಮಗಾರಿ ಕೈಗೊಂಡು, ಬದುವು, ಚೆಕ್ ಡ್ಯಾಂ ನಾಲಾ ಬಂಡಿಂಗ್, ಬಾಂದಾರಗಳನ್ನು ಮಣ್ಣು ಸವಕಳಿ ಆಗದಂತೆ ತಡೆಯಲು ಡೋಣಿ ನದಿ ಪಾತ್ರದ ಎರಡೂ ಬದಿ ಒಡ್ಡುಗಳನ್ನು ನಿರ್ಮಾಣ ಮಾಡಿ ಅರಣೀಕರಣ ಗಿಡಗಳನ್ನು ನೆಡುವುದಾಗಬೇಕು. ಪ್ರಸಕ್ತ ಸಾಲಿನಲ್ಲಿ ಡೋಣಿ ನದಿ ಪಾತ್ರದ ಹತ್ತಾರು ಸಾವಿರ ಎಕರೆ ನೆರೆಯಿಂದ ಬೆಳೆಗಳು ಹಾಳಾಗಿವೆ. ಕಾರಣ ಬೇಗನೆ ಈ ಯೋಜನೆ ಕೈಗೆತ್ತಿಕೊಳ್ಳಬೇಕು. ಆಲಮಟ್ಟಿ ಆಣೆಕಟ್ಟೆಯ ಎತ್ತರ 524.256 ಮೀಟರ್ಗೆಗೆ ಎತ್ತರಿಸಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳಿಂದ ಭೂಮಿಗೆ ನೀರು ಹರಿಸಲು ಅನುಕೂಲವಾಗುತ್ತದೆ. ಕೃಷ್ಣಾ ಕೊಳ್ಳದ 3ನೇ ಹಂತದ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಿ ಅದರಂತೆ ಮುಳುಗಡೆ ಪ್ರದೇಶದ ರೈತರಿಗೆ ಪುನರ್ವಸತಿ ಹಾಗೂ ಪರಿಹಾರವನ್ನು ಕೊಟ್ಟು ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಬೇಕು. ಈ ಎಲ್ಲ ಕಾಮಗಾರಿಗಳು ಶೀಘ್ರವೇ ಆಗಬೇಕೆಂದು ಭಾರತೀಯ ಕಿಸಾನ ಸಂಘದ ಮಲ್ಲನಗೌಡ ಮಹಾದೇವಗೌಡ ಪಾಟೀಲ ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. 

ಬಡ ಕಲಾವಿದ ಮಾಶಾಸನಕ್ಕೆ ಮನವಿ:*  ಬಾಗಲಕೋಟೆ ಜಿಲ್ಲೆಯ ಮುಧೋಳ ಮತ ಕ್ಷೇತ್ರದ ಉತ್ತೂರ ಗ್ರಾಮದ ಬಡ ಕಲಾವಿದ ಸೈದುಸಾಬ ನದಾಫ್ ಕಲಾವಿದರ ಮಾಶಾಸನವನ್ನು ಮಂಜೂರ ಮಾಡಿಕೊಡಬೇಕೆಂದು ಸಿಎಂ ರವರಿಗೆ ಮನವಿ ಅರ​‍್ಿಸಿಲಾಗಿದೆ. 

ಮನವಿ ಮಾಡಿಕೊಂಡಿರುವ ಸೈದಾಬಿ ನದಾಫ್, ತಮ್ಮ ತಂದೆ ಸೈದುಸಾಬ ಆರ್‌.ನದಾಫ್ ಬಾಲ್ಯದಿಂದಲೂ ಜನಪದ ಹಾಗೂ ರಿವಾಯಿತ ಕಲಾವಿದರಾಗಿದ್ದಾರೆ. 40 ವರ್ಷಗಳಿಂದಲೂ ರಿವಾಯತಿ,ಜನಪದ ಕಲಾವಿದರಾಗಿ ಉಪಜೀವನ ನಡೆಸುತ್ತಾ ಬಂದಿದ್ದಾರೆ. ವಯೋಸಹಜ ಸಮಸ್ಯೆಗಳು, ತುಂಬು ಸಂಸಾರದ ಹೊರೆಯನ್ನು ಹೊರಲು ಕಷ್ಟವಾಗುತ್ತಿದೆ. ಮಾಶಾಸನ ಮಂಜೂರಾತಿಗಾಗಿ 2015 ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯದ ಕುರಿತು ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದಾಖಲಾತಿಗಳು ಸಲ್ಲಿಸಲಾಗಿದೆ.ಆದರೆ ಈಗ ದಾಖಲೆಗಳು ಕಳೆದಿವೆ. ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾಗ ತತಕ್ಷಣವೇ ಅರ್ಜಿ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಸಹ ಸಲ್ಲಿಸಿದ್ದೇವೆ. ಆದರೆ ಇಲ್ಲಿವರೆಗೆ ಮಾಶಾಸನ ಮಂಜೂರಾತಿ ಅಥವಾ ಹಿಂಬರವೂ ಇಲ್ಲದಂತಾಗಿದೆ. ಬೆಂಗಳೂರ, ಬಾಗಲಕೋಟೆ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. 70 ವರ್ಷ ವಯಸ್ಸು ಆಗಿದ್ದರಿಂದ ನನ್ನ ತಂದೆಗೆ ಆರ್ಥಿಕ, ಆರೋಗ್ಯ ಸಮಸ್ಯೆಗಳು ತಲೆದೋರಿವೆ. ನಮ್ಮ ತಾಯಿ, ಮಕ್ಕಳು ಸಂಸಾರದ ನಿರ್ವಹಣೆಗೆ ಅಡಚಣೆಯಾಗಿದೆ. ನನ್ನ ತಂದೆ ಉಸಿರು ಇರುವುದರೊಳಗೆ ಒಮ್ಮೆಯಾದರೂ ಸರಕಾರದ ಕಲಾವಿದರ ಮಾಶಾಸನ ತೆಗೆದುಕೊಂಡು ಸಂತೃಪ್ತಿ ಜೀವನ ನಡೆಸುವಂತೆ ನಮ್ಮ ಮೇಲೆ ದಯೆ ತೋರಿ ಮಾಶಾಸನ ಮಂಜೂರಾತಿ ಮಾಡಿಕೊಡಿ ಎಂಬ ಮನದಾಳದ ನೋವನ್ನು ಸಿಎಂ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತೋಡಿಕೊಂಡಿದ್ದಾರೆ ಬಡ ಕಲಾವಿದನ ಪುತ್ರಿ ಸೈದಾಬಿ ಎಸ್‌. ನದಾಫ್ಶ್ರ 

ವೀರಭದ್ರೇಶ್ವರ ಜಯಂತಿ ಸರ್ಕಾರವೇ ಆಚರಿಸಲು ಆಗ್ರಹ:* ಕರ್ನಾಟಕದ ಮೂಲ ಪುರುಷ ಶ್ರೀ ವೀರಭದ್ರೇಶ್ವರರ ಜಯಂತಿ ಸರ್ಕಾರವೇ ಆಚರಣೆ ಮಾಡಬೇಕು ಎಂದು ಸಿಎಂ, ಡಿಸಿಎಂ ರವರಿಗೆ ಮನವಿ ಸಲ್ಲಿಸಲಾಗಿದೆ. 

ವೀರಭದ್ರೇಶ್ವರರು ಮೂಲ ಪುರುಷರಾಗಿ ಪರಮಾತ್ಮ ಸ್ವರೂಪದಲ್ಲಿ ನಾಡಿಗೆ ಆಶೀರ್ವದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವೀರಪೂವಂರ್ತರು ವೀರಭದ್ರೇಶ್ವರ ಒಡಪುಗಳನ್ನು ಹೇಳುತ್ತಾ ಸಮಾಜದಲ್ಲಿ ಕಾಂತಿ ನೆಲೆಸುತ್ತಿದ್ದಾರೆ. ಅಲ್ಲದೇ ಗುಗ್ಗಳೋತ್ಸವ ಮಾಡಿ ದೇವರಿಗೆ ಹಾಗೂ ಜಾತಿ ವಿಜಾತಿ ಎನ್ನದೇ ಸಮಾಜದ ಎಲ್ಲಾ ಬಾಂಧವರಿಗೆ ಒಳಿತನ್ನುಂಟು ಮಾಡಿ ಶಾಂತಿ ಸಮಾಧಾನ ನೆಲೆಸುತ್ತಿದ್ದಾರೆ. ಹಾಗೂ ಇತಿಹಾಸ ಪುರಾಣದಂತೆ ನೇಪಾಳದಲ್ಲಿ ತಕ್ಷಬ್ರಹ್ಮ ಹೋಮ ಮಾಡುವಾಗ ಅಲ್ಲಿ ನೆರೆದ ಜನರಲ್ಲಿ ಶಿವಪಾರ್ವತಿಯರನ್ನು ಅವಮಾನಗೊಳಿಸಿದ  ವೀರಭದ್ರೇಶ್ವರನ ಜನನವಾಗಿದೆ. ಇವರು ಅಂದಿನ ತಕ್ಷಬ್ರಹ್ಮನ ತಪ್ಪಿಗೆ ಮುಂಡಾಡಿ ಅದಕ್ಕೆ ಟಗರಿನ ತಲೆಯನ್ನು ಸಮಯದಲ್ಲಿ ಪರಮೇಶ್ವರನ ರೂಪವಾಗಿ ಅಂಟು ತಕ್ಷಬ್ರಹ್ಮನು ಸದಾ ವೀರಭದ್ರೇಶ್ವರನ ಸೇವಕನಾಗಿ ಪ್ರಾರ್ಥಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ  ಶ್ರೀ ವೀರಭದ್ರೇಶ್ವರನ ಜಯಂತಿಯನ್ನು ಸರ್ಕಾರದ ಮೂಲಕ ಆಚರಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಆದರ್ಶ ಪ್ರಾಯರಾಗಬೇಕೆಂದು ವೀರಪೂವಂರ್ಕರ ಅಧ್ಯಕ್ಷ  ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅದಷ್ಟು ಶೀಘ್ರವಾಗಿ ನಾಡಿನಲ್ಲಿರುವ ಎಲ್ಲಾ ಮಹಾನುಭಾವರ ಜಯಂತಿಗಳನ್ನು ತಾವು ಆಚರಿಸುತ್ತಿದ್ದು ವೀರಭದ್ರೇಶ್ವರರ ಜಯಂತಿಯನ್ನು ಆಚರಿಸುವ ಮೂಲಕ ಕಳಶಪ್ರಾಯರಾಗಿ ಶೋಭಾಯಮಾನವಾಗಬೇಕೆಂದು ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

 ಇನ್ನೂ ಹಲವು ಸಂಘ,ಸಂಸ್ಥೆಯ ಮುಖಂಡರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಿಎಂ,ಡಿಸಿಎಂ ಅವರಿಗೆ ಮನವಿ ಸಲ್ಲಿಸಿದರು.