ಬೆಂಗಳೂರು, ಮಾ 9, ಮಕ್ಕಳಿಗೆ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡಲು ದೇಶದಲ್ಲೇ ಮೊದಲ ಬಾರಿಗೆ ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಎಸ್ಬಿಐ ವೃತ್ತದಲ್ಲಿ ನವೀಕೃತಗೊಂಡ ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಪ್ರತಿ ನಿತ್ಯ 5000 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಸಂಚಾರ ದಟ್ಟಣೆ ದಿನೇ ದಿನೇ ಸವಾಲಾಗಿ ಪರಿಣಮಿಸುತ್ತಿದೆ. ಸಂಚಾರ ದಟ್ಟಣೆಯ ಸವಾಲನ್ನು ಎದುರಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು. ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದೂ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಸುಗಮ, ಸರಳ ಹಾಗೂ ಸುರಕ್ಷಿತ ಸಂಚಾರ ಎಲ್ಲರ ಆದ್ಯತೆಯಾಗಬೇಕು ಎಂದರು. ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ನಗರದ 12 ಜಂಕ್ಷನ್ಗಳಲ್ಲಿ ಸುಗಮ ಹಾಗೂ ಸರಳ ವಾಹನ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗುವುದು. ನಗರದಲ್ಲಿನ ಅತಿ ಸಂಚಾರ ದಟ್ಟಣೆಯ 12 ಜಂಕ್ಷನ್ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮೊದಲು ಸಂಚಾರ ನಿಲುಗಡೆಯಾಗದಂತೆ ಸುಗಮ, ಸರಳವಾಗಿ ವಾಹನಗಳು ಸಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಯಾವ ನಗರದಲ್ಲಿ ಉತ್ತಮ ಸಂಚಾರ ವ್ಯವಸ್ಥೆ ಇರುತ್ತದೋ ಅಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ ವಾಗಿರುತ್ತದೆ.
ಅಪರಾಧ ಕೃತ್ಯಗಳಿಗೂ ಅವಕಾಶವಿರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸುಗಮ, ಸರಳ, ಸಂಚಾರಕ್ಕೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಹೇಳಿದರು. ರಾತ್ರಿ ವೇಳೆ ಸಂಚಾರ ಸುಗಮ ಗೊಳಿಸುವುದು ಮಹತ್ವದ ವಿಷಯವಾಗಿದ್ದು, ನಗರದ ವೈಟ್ ಫೀಲ್ಡ್ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುವುದನ್ನು ಗಂಭೀರವಾಗಿ ಪರಿಗಣಿಸಿ ವೈಟ್ ಫೀಲ್ಡ್ ಸಂಚಾರ ಉಪವಿಭಾಗವನ್ನು ಆರಂಭಿಸಲಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ನಿಯೋಜಿಸಲಾಗುವುದು ಎಂದು ತಿಳಿಸಿದರು. ಸಂಚಾರ ನಿಯಮಗಳ ಪಾಲನೆ ಬಗ್ಗೆ ಶಾಲೆಗಳಲ್ಲಿ ಪೊಲೀಸ್ ಅಧಿಕಾರಿಯೊಬ್ಬರೇ ಪಾಠ ಮಾಡುವ ಅವಶ್ಯಕತೆ ಇದೆ. ಪ್ರತಿ ಶಾಲೆಗೂ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತೆರಳಿ ಸುರಕ್ಷಿತ, ಸುಗಮ ಸಂಚಾರ ಹಾಗೂ ನಿಯಮಗಳ ಪಾಲನೆ ಬಗ್ಗೆ ಪಾಠ ಮಾಡುವಂತೆ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪಿಂಕ್ ಹೊಯ್ಸಳ ವಾಹನಗಳ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರು ಹೆಚ್ಚು ಉದ್ಯೋಗಿಗಳಾಗಿರುವ ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳ ಬಳಿ ಪಿಂಕ್ ಹೊಯ್ಸಳ ಗಸ್ತನ್ನು ಹೆಚ್ಚಿಸಿ ರಕ್ಷಣೆ ನೀಡಲಾಗುವುದೆಂದು ಹೇಳಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ , ಸಂಚಾರ ದಟ್ಟಣೆ ನಿವಾರಣೆ ಕುರಿತು 60 ವರ್ಷಗಳಿಂದ ಜಾಗೃತಿ ಮೂಡಿಸಲಾಗುತ್ತಿದ್ದರೂ ಸುಧಾರಣೆ ಯಶಸ್ವಿಯಾಗಿಲ್ಲ.
ವಾಹನ ಚಾಲನಾ ಪರವಾನಗಿ ಪಡೆದುಕೊಂಡರೆ ತಮಗೆ ರಸ್ತೆ ನಿಯಮಗಳ ಅರಿವಿದೆ ಎಂದು ವಾಹನ ಚಾಲಕರು ತಿಳಿದು ಕೊಳ್ಳುವುದು ತಪ್ಪು ಎಂದರು. ವಾಹನ ಚಾಲನಾ ಪರವಾನಗಿ ಪಡೆದ ವಯಸ್ಕರಿಗಿಂತ 12 ರಿಂದ 16 ವರ್ಷ ಒಳಗಿನವರಿಗೆ ಸುಗಮ ಸಂಚಾರದ ಬಗ್ಗೆ ಜಾಗೃತಿ ಮೂಡಿಸಿದರೆ ಹೆಚ್ಚು ಪ್ರಯೋಜನವಾಗಲಿದೆ. ಅಲ್ಲದೇ ಸಂಚಾರ ದಟ್ಟಣೆ ನಿವಾರಣೆಗೂ ಅನುಕೂಲವಾಗಿದೆ. ಇದನ್ನು ಪಾಲಿಸಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ಮಕ್ಕಳ ಸಂಚಾರ ಉದ್ಯಾನವನ ಅಭಿವೃದ್ಧಿ ಪಡಿಸಿದ್ದ ವಾಸ್ವಾನಿ ಗ್ರೂಪ್ನ ನಿರ್ದೇಶಕ ಅರುಣ್ ಅಡ್ವಾಣಿ, ಪಾರ್ಕ್ನಲ್ಲಿ ಮಕ್ಕಳಿಗೆ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡುವ ಚಿತ್ರಗಳನ್ನು ರಚಿಸಿದ ರವಿ ಹಾಗೂ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಡಿಸಿಪಿಗಳಾದ ಎಂ.ನಾರಾಯಣ, ಡಾ.ಸೌಮ್ಯಲತಾ, ಸಾ.ರಾ. ಫಾತೀಮಾ ಮತ್ತಿತರರು ಪಾಲ್ಗೊಂಡಿದ್ದರು