ಕೊರೊನಾ ಭೀತಿ: ರಾಜ್ಯಾದ್ಯಂತ ಕಟ್ಟೆಚ್ಚರ

ಬೆಂಗಳೂರು, ಮಾ. 3, ಮಾರಣಾಂತಿಕ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರೇಕ್ಷಣೀಯ ಸ್ಥಳಗಳು ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.ಕೊರೊನಾ ಸೋಂಕಿತ ತೆಲಂಗಾಣದ ಟೆಕ್ಕಿ ಬೆಂಗಳೂರಿಗೆ ಬಂದಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದ 10 ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.ರಾಜೀವ್ ಗಾಂಧಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.ತೆಲಂಗಾಣದ ಟೆಕ್ಕಿ ಯಲ್ಲಿ ಕೊರೋನಾ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕುರಿತು ಆರೋಗ್ಯ ಇಲಾಖೆಯ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ, ದುಬೈನಿಂದ ಬಂದ ವ್ಯಕ್ತಿ ಎರಡು ದಿನ ಬೆಂಗಳೂರಿನ ಪಿಜಿಯಲ್ಲಿ ತಂಗಿದ್ದನು. ಬಳಿಕ ಆ ವ್ಯಕ್ತಿ ಬಸ್ಸಿನಲ್ಲಿ ಹೈದರಾಬಾದ್ ಗೆ ಪ್ರಯಾಣಿಸಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪೋಲೊ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೊರೋನಾ ಸೋಂಕು ಪತ್ತೆಯಾಗಿತ್ತು. ನಂತರ ಆತನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.ಆತನ ಜತೆ ಪ್ರಯಾಣಿಸಿದ್ದ ಪ್ರಯಾಣಿಕರನ್ನು ಪತ್ತೆ ಮಾಡಲಾಗಿದ್ದು, ಸದ್ಯ ಅವರಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೂ, ಅವರೆಲ್ಲರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.ಟೆಕ್ಕಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ಸು ನಿಲ್ದಾಣದಿಂದ ಹೈದರಾಬಾದ್ ಗೆ ಪ್ರಯಾಣಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಕೊರೋನಾ ಭೀತಿ ಎದುರಾಗಿದ್ದು,ಸಾರಿಗೆ ಸಿಬ್ಬಂದಿಗೆ ಮಾಸ್ಕ್ ಧರಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಸೂಚಿಸಿದ್ದಾರೆ.ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಮಲೇಷ್ಯಾ, ಥೈಲ್ಯಾಂಡ್, ನೇಪಾಳ ಸೇರಿ 12 ದೇಶಗಳಿಂದ ಬರುತ್ತಿರುವ ವಿಮಾನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ,ಹೈದರಾಬಾದ್ ನಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿನ ಪ್ರಯಾಣಿಕರ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.ಮೂರು ತಂಡಗಳಲ್ಲಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಡಿಎಚ್ಓ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.ವಿದೇಶದಿಂದ ಬಂದ 11 ಜನರನ್ನು ತಪಾಸಣೆ ಮಾಡಲಾಗಿದ್ದು, ನಾಲ್ವರಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ, ಇನ್ನುಳಿದ7 ಜನರ ಮೇಲೂ ತೀವ್ರ ನಿಗಾವಹಿಸಲಾಗಿದೆ ಎಂದರು.ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗದಂತೆ ಸೂಚಿಸಲಾಗಿದ್ದು, ಅಲ್ಲದೇ, ಅವರ ಕುಟುಂಬ ಸದಸ್ಯರೊಂದಿಗೂ ಸೇರದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಯಾದಗಿರಿ ಬಸ್ಸು ನಿಲ್ದಾಣದಲ್ಲಿ ಸೋಂಕು ಸಂಬಂಧ ಪತ್ತೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಜಿಲ್ಲೆಯಿಂದ ಪ್ರತಿನಿತ್ಯ 11 ಬಸ್ಸುಗಳು ಹೈದರಾಬಾದ್ ಗೆ ಪ್ರಯಾಣಿಸುತ್ತವೆ. ಆದ್ದರಿಂದ ಆರೋಗ್ಯ ಇಲಾಖೆಗೆ ಮುಂಜಾಗ್ರತಾ ಕ್ರಮಗೊಳ್ಳಲು ಮನವಿ ಮಾಡಲಾಗುವುದು ಎಂದು ಯಾದಗಿರಿ ವಿಭಾಗೀಯ ನಿಯಂತ್ರಣಕಾರಿ ಹೇಳಿದ್ದಾರೆ.ಇನ್ನು, ಕರಾವಳಿಯಲ್ಲಿಯೂ ಹೈಲರ್ಟ್ ಘೋಷಿಸಲಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ, ಹಡಗಿನಲ್ಲಿ ಬರುತ್ತಿರುವ ಪ್ರಯಾಣಿಕರ ಆರೋಗ್ಯವನ್ನು ಪರಿಶೀಲಿಸಲಾಗುತ್ತಿದೆ.ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಪಟ್ಟೆದಕಲ್ಲು, ಐಹೊಳೆ, ಮಹಾಕೂಟ, ಕೂಡಲಸಂಗಮ ಸ್ಥಳಗಳಲ್ಲಿ ವಿದೇಶಿಗರು ಹೆಚ್ಚಾಗಿ ಭೇಟಿ ನೀಡುವ ಹಿನ್ನಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಡಿಹೆಚ್ ಒ ಅನಂತ್ ದೇಸಾಯಿ ತಿಳಿಸಿದ್ದಾರೆ.ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ಎಲ್ಲಾ ಜವಾಬ್ದಾರಿಯನ್ನು ನಾನೇ ಹೊತ್ತುಕೊಂಡಿದ್ದೇನೆ. ಈಗಾಗಲೇ ಕೊರೋನಾ ಸೋಂಕಿತ ವ್ಯಕ್ತಿ ಜತೆಗೆ ಇದ್ದವರ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎಂದರು.ಸೋಂಕಿತ ವ್ಯಕ್ತಿ ಯಾವ ಯಾವ ಸ್ಥಳಗಳಿಗೆ ತೆರಳಿದ್ದ, ಯಾರ ಸಂಪರ್ಕದಲ್ಲಿದ್ದ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು. ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.