ಸಿಎಎ ವಿರುದ್ಧ ಕೇರಳದಲ್ಲಿ ಹರತಾಳ: 100ಕ್ಕೂ ಅಧಿಕ ಮಂದಿ ಬಂಧನ; ಜನಜೀವನ ಅಸ್ತವ್ಯಸ್ತ

ತಿರುವನಂತಪುರ, ಡಿ.17:       ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕೇರಳದಲ್ಲಿ ಮಂಗಳವಾರ ಕರೆ ನೀಡಿರುವ ಹರತಾಳದ ವೇಳೆ ಹಿಂಸಾಚಾರ ಉಂಟಾಗಿದ್ದು,  ರಾಜ್ಯದಲ್ಲಿ 100 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.ಎಸ್ಡಿಪಿಐ, ವೆಲ್ಫೇರ್ ಪಾರ್ಟ್, ಕೇರಳ ಮುಸ್ಲಿಂ ಯೂತ್ ಫೆಡರೇಷನ್, ಬಿಎಸ್ಪಿ, ಎಸ್ಜಿಒ ಮತ್ತು ಐಕ್ಯಮತ ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಹರತಾಳ ಹಿಂಸಾಚಾರಕ್ಕೆ ತಿರುಗಿದಾಗ ಚಳವಳಿಗಾರರು ವಾಹನಗಳ ಮೇಲೆ ಕಲ್ಲು ತೂರಿದರು. ಪರಿಣಾಮ ವೀ ಮಾರ್ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜ್ಯಾದ್ಯಂತ ರೈಲು ಸೇವೆ ವಿಳಂಬವಾಗಿದ್ದು, ಹಲವೆಡೆ ಖಾಸಗಿ ಬಸ್ಗಳು ರಸ್ತೆಗಿಳಿದಿಲ್ಲ.ಆದಾಗ್ಯೂ, ಸಾರಿಗೆ ಇಲಾಖೆಯ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತಿದ್ದು, ಕೆಲವೆಡೆ ಪ್ರತಿಭಟನಕಾರರು ಬಸ್ ಅನ್ನು ತಡೆದು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ.