ಜಮ್ಮುವಿನಲ್ಲಿ ಬೆಂಕಿ ಆಕಸ್ಮಿಕದ ಬಳಿಕ ಕಟ್ಟಡ ಕುಸಿತ: ಅವಶೇಷಗಳಡಿ ಸಿಲುಕಿರುವ ಮೂವರು ಅಗ್ನಿಶಾಮಕ ಸಿಬ್ಬಂದಿ

ಜಮ್ಮು, ಫೆ.12 :    ಇಲ್ಲಿನ ಮೂರು ಅಂತಸ್ತಿನ ಮರದ ಕಟ್ಟಡದಲ್ಲಿ ಭಾರೀ  ಬೆಂಕಿ ಕಾಣಿಸಿಕೊಂಡ ನಂತರ ಬೆಂಖಿ ನಂದಿಸಲು ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಕಟ್ಟಡ ಕುಸಿದ ಪರಿಣಾಮ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ಮೂವರು ಇನ್ನೂ ಭಗ್ನಾವಶೇಷಗಳಡಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

"ನಮ್ಮ ಮೂವರು ಸಿಬ್ಬಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ"  ಎಂದು ಇಲ್ಲಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ವಿ. ಕೆ. ಸಿಂಗ್  ಯುಎನ್‌ಐಗೆ ತಿಳಿಸಿದ್ದಾರೆ.

"ತಲಾಬ್ ಟಿಲ್ಲೊ  ಪ್ರದೇಶದ ಗೋಲ್ ಪುಲಿಯಲ್ಲಿ ಮರದ ಕಿಯೋಸ್ಕ್‌ನಲ್ಲಿ ಸುಮಾರು ಬೆಳಗ್ಗೆ 5.15ರ ಸುಮಾರಿಗೆ ಬೆಂಕಿ  ಕಾಣಿಸಿಕೊಂಡಿದೆ" ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಅಂಗಡಿಯಲ್ಲಿ ಮರದ ತುಂಡುಗಳನ್ನು ಸಾಲಾಗಿ ಇಡಲಾಗಿತ್ತು. ಬೆಂಕಿಯ ಜ್ವಾಲೆಗೆ ಮೂರು ಅಂತಸ್ತಿನ ಕಟ್ಟಡವೂ ಕುಸಿಯಿತು ಎಂದು ಅವರು ಹೇಳಿದರು.

"ಇಬ್ಬರು  ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದು, ಅಗ್ನಿಶಾಮಕ  ನಿಯಂತ್ರಣ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ  ಕಟ್ಟಡ ಕುಸಿದಿದ್ದು, ಈ ವೇಳೆ ಕೆಲವರು ಕಟ್ಟಡದ ಭಗ್ನಾವಶೇಷಗಳಲ್ಲಿ  ಸಿಲುಕಿಕೊಂಡಿದ್ದಾರೆ" ಎಂದು ಅವರು ಹೇಳಿದರು.

 ಅಗ್ನಿಯ ಜ್ವಾಲೆ ನಿಯಂತ್ರಣಕ್ಕೆ ಬಾರದಿದ್ದಾಗ ಹೆಚ್ಚುವರಿಯಾಗಿ 10 ಅಗ್ನಿಶಾಮಕ ಟೆಂಡರ್‌ಗಳನ್ನು ಕರೆಸಿಕೊಂಡು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.