ಪದವಿಗಳಿಗಿಂತ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಮುಖ್ಯ : ಪ್ರೊ. ಸಿ.ಎಂ. ತ್ಯಾಗರಾಜ

ಪದವಿಗಳಿಗಿಂತ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಮುಖ್ಯ : ಪ್ರೊ. ಸಿ.ಎಂ. ತ್ಯಾಗರಾಜ  Building a personality is more important than degrees: Prof. C.M. Thyagaraja

ನಮ್ಮ ಜೀವನದುದ್ದಕ್ಕೂ ನಾವು ಎದುರಿಸುವ ಆರ್ಥಿಕ ಬಡತನ ಶಾಶ್ವತವಲ್ಲ ಬದಲಿಗೆ ಜ್ಞಾನದ ಬಡತನ ಶಾಶ್ವತ ಮತ್ತು ನಾವು ಪಡೆಯುವ ಪದವಿಗಳಿಗಿಂತ ನಾವು ರೂಪಿಸಿಕೊಳ್ಳುವ ವ್ಯಕ್ತಿತ್ವ ಬಹಳ ಮುಖ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ತಿಳಿಸಿದರು. 

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿ.ಜಿ.  ಜಿಮಖಾನಾ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ "ಯುವ ಸಿಂಚನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.   

ವಿದ್ಯಾರ್ಥಿ ಬದುಕಿನಲ್ಲಿ ಆತ್ಮ ವಿಶ್ವಾಸ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ  ಮತ್ತು ಸಾಮರ್ಥ್ಯತೆಯಿಂದ ಅನೇಕ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿಕ್ಷಣ ಸಾಧ್ಯತೆಗಳನ್ನು ಅನ್ವೇಷಿಸಿ ವಿಪುಲ ಅವಕಾಶಗಳ ಸದುಪಯೋಗ ಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.   

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಾರಿಗೆ ಸಚಿವಾಲಯದ ಮಾಜಿ ಮುಖ್ಯ ಅಭಿಯಂತರರು  ಸುರೇಶ ಸ್ಯಾಂಟಿ ಮಾತನಾಡಿ,  ವಿದ್ಯಾರ್ಥಿಗಳು ಪೋಷಕರ ಮೇಲೆ ಅವಲಂಬಿತರಾಗದೆ ಕಲಿಕೆಯ ಜೊತೆಗೆ ಗಳಿಕೆಯತ್ತಲೂ ಗಮನಹರಿಸಿ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳಾಗಿ ತಾವು ಕಲಿಯುವ ಸಂಸ್ಥೆಯೆಡೆಗೆ ಸಮಗ್ರತೆ ಮತ್ತು ಗೌರವದಿಂದ ಕಾಣಬೇಕು ಎಂದು ಹೇಳಿದರು.   

ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಮೀರಾ ಸುರೇಶ ಪಂಡಿತ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ನಿರ್ಧಾರ ತಗೆದುಕೊಳ್ಳುವ ಸಾಮರ್ಥ್ಯ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ ಹೊಂದುವುದು ಅತಿ ಅವಶ್ಯಕವಾಗಿದೆ. ನಾವು ಕಲಿತ ಶಿಕ್ಷಣ ಕೇವಲ ಪದವಿಗೆ ಸೀಮಿತಗೊಳ್ಳದೆ ಸಮಾಜದ ಒಳಿತಿಗೆ ಕೊಡುಗೆಯಾಗಬೇಕು ಎಂದು ತಿಳಿಸಿದರು.   

ಕಾರ್ಯಕ್ರಮದ ಗೌರವಾನ್ವಿತ ಅಥಿತಿಗಳಾಗಿ ಭಾಗವಹಿಸಿದ ಕುಲಸಚಿವ ಸಂತೋಷ ಕಾಮಗೌಡ ಇವರು ಮಾತನಾಡಿ, ವೈವಿಧ್ಯಮಯ ಬದುಕನ್ನು ಕಟ್ಟಿಕೊಳ್ಳಲು ಇರುವ ಆವಾಸ ಸ್ಥಾನವೆಂದರೆ ಅದು ವಿಶ್ವವಿದ್ಯಾಲಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ, ಸೃಜನಾತ್ಮಕವಾಗಿ ಮತ್ತು ಆತ್ಮವಿಶ್ವಾಸದಿಂದ ಜ್ಞಾನಾರ್ಜನೆ ಪಡೆದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಲು ಶ್ರಮಿಸಬೇಕು ಎಂದು ಹೇಳಿದರು.   

ಸಿಂಡಿಕೇಟ್ ಸದಸ್ಯೆ ಡಾ. ಕಾವೇರಿ ಎಚ್‌. ಎಂ ಮಾತನಾಡಿದರು. ವಿವಿಧ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಸುಜಾತ ಕಲ್ಮೇಶ ಭಾಗವಹಿಸಿದ್ದರು. ಇನ್ನುಳಿದಂತೆ ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಎನ್ . ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ ಸಪ್ನ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ವಾಯ್‌. ಎಸ್‌. ಬಲವಂತಗೋಳ, ಪಿ.ಜಿ.  ಜಿಮಖಾನಾ ವಿದ್ಯಾರ್ಥಿ ಒಕ್ಕೂಟ ನಿರ್ದೇಶಕಿ ಡಾ ಸುಷ್ಮಾ ಆರ್, ಸಂಯೋಜಕಿ ಡಾ ಮಂಜುಳಾ ಜಿ.ಕೆ, ಕ್ರೀಡಾ ಸಂಯೋಜಕ ಡಾ.ಚಂದ್ರಶೇಖರ ಬನಸೋಡೆ, ಸಾಂಸ್ಕೃತಿಕ ಸಂಯೋಜಕಿ ಡಾ ಮಹೇಶ್ವರಿ ಎಸ್ ಕಾಚಾಪುರ್, ಪ್ರಧಾನ ಕಾರ್ಯದರ್ಶಿ ಸಮರ್ಥ ಹಿರೇಕೊಡಿ ಸೇರಿದಂತೆ ವಿ ವಿದ್ಯಾರ್ಥಿ ಪ್ರತಿನಿಧಿಗಳು, ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.