ನವದೆಹಲಿ, ಏ.15, ಜರ್ಮನ್ ಕಂಪನಿ ಬಾಷ್ ಇಂಡಿಯಾ “ಕೋವಿಡ್-19” ಪ್ರಧಾನಿ ಪರಿಹಾರ ನಿಧಿಗೆ 5 ಕೋಟಿ ರೂ. ಮತ್ತು ವಿವಿಧ ಸಮುದಾಯ ಕಲ್ಯಾಣ ನಿಧೀಗೆ ಹೆಚ್ಚುವರಿ 45 ಕೋಟಿ ರೂ. ನೀಡಿದೆ. ದೀನದಲಿತರಿಗೆ ಸಹಾಯ ಮಾಡಲು ಕಂಪನಿಯು ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಬಿಡಾದಿ ಸ್ಥಾವರದಲ್ಲಿರುವ ತನ್ನ ಅಡುಗೆಮನೆಯ ಮೂಲಕ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಹಯೋಗದಲ್ಲಿ 4,000 ವಲಸೆ ಕಾರ್ಮಿಕರು ಮತ್ತು ಇತರ ನಿರ್ಗತಿಕ ವ್ಯಕ್ತಿಗಳಿಗೆ ಪ್ರತಿದಿನವೂ ಊಟವನ್ನು ನೀಡುತ್ತಿದೆ. ಲಾಕ್‌ಡೌನ್ ವೇಳೆಯಲ್ಲಿ ತೊಂದರೆ ಅನುಭವಿಸುತ್ತಿರುವ 1,500 ನಿರ್ಗತಿಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದೆ. ಈ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಭಾರತದ ಬಾಷ್ ಗ್ರೂಪ್ ನ ಅಧ್ಯಕ್ಷ ಮತ್ತು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌಮಿತ್ರ ಭಟ್ಟಾಚಾರ್ಯ, “ಬಾಷ್ ಯಾವಾಗಲೂ ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಮೌಲ್ಯ ಧಾರಿತ ಸಂಸ್ಥೆಯಾಗಿದ್ದು, ಅದರ ಸುತ್ತಲಿನ ಸಮುದಾಯಗಳು ಮತ್ತು ನೆರೆಹೊರೆಗಳ ಅಗತ್ಯಗಳಿಗೆ ಒತ್ತು ನೀಡುತ್ತದೆ. ಇದು ನಿಜಕ್ಕೂ ರಾಷ್ಟ್ರಕ್ಕೆ ಕಠಿಣ ಸಮಯ. ಪ್ರಧಾನ ಮಂತ್ರಿ ಮೋದಿಯವರ ಕ್ರಮಕ್ಕೆ ಅನುಗುಣವಾಗಿ, ಈ ಜಾಗತಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಬೆಂಬಲಿಸುತ್ತೇವೆ” ಎಂದಿದ್ದಾರೆ.