ಗಡಿ ಪ್ರದೇಶವನ್ನು ಹರಾಜಿಗಿಟ್ಟಿಲ್ಲ, ನಮ್ಮ ತಂಟೆಗೆ ಬಂದರೆ ಎಚ್ಚರ- ರೂಪಾಲಿ ನಾಯ್ಕ ಆಕ್ರೋಶ

Karwar MLA Rupali naik

ಗಡಿ ಪ್ರದೇಶವನ್ನು ಹರಾಜಿಗಿಟ್ಟಿಲ್ಲ, ನಮ್ಮ ತಂಟೆಗೆ ಬಂದರೆ ಎಚ್ಚರ- ರೂಪಾಲಿ ನಾಯ್ಕ ಆಕ್ರೋಶ

ಉದ್ಧವ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ 

ಕಾರವಾರ:ಜ.18;ಕರ್ನಾಟಕದ ಗಡಿ ಪ್ರದೇಶವನ್ನು ನಾವು ಹರಾಜಿಗಿಟ್ಟಿಲ್ಲ. ಪದೆ ಪದೇ ಕನ್ನಡಿಗರನ್ನು ಕೆರಳಿಸುವ ಕೆಲಸ ಬಿಡದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ಎದುರೇಟು ನೀಡಿದ್ದಾರೆ.

ಕರ್ನಾಟಕದ ಮರಾಠಿ ಭಾಷಿಕ ಪ್ರದೇಶವನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುತ್ತೇವೆ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ತಾವೂ ಕೂಡ ಶಾಸಕರಾಗಿದ್ದು ಮರಾಠಾ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು, ಗಡಿ ಪ್ರದೇಶದ ಎಲ್ಲರೂ ಕರ್ನಾಟಕದ ನೆಲ, ಜಲ ಬಳಸಿಕೊಂಡು ಇಲ್ಲಿನವರಾಗಿಯೇ ಇದ್ದೇವೆ. ಅವರೇನಾದರೂ ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ. ಎಚ್ಚರ ಇರಲಿ ಎಂದು ಶ್ರೀಮತಿ ರೂಪಾಲಿ ಎಸ್.ನಾಯ್ಕ ಗುಡುಗಿದ್ದಾರೆ.

ಉದ್ಧವ ಠಾಕ್ರೆ ಅವರೇ ನೀವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೀರಾ. ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಕಷ್ಟು ಅವಕಾಶಗಳಿವೆ. ಮೊದಲು ಅಲ್ಲಿನ ಜನರ ವಿಶ್ವಾಸಗಳಿಸಿ. ಅದು ಬಿಟ್ಟು ಪದೆ ಪದೇ ನಮ್ಮ ತಂಟೆಗೆ ಬರಬೇಡಿ ಎಂದು ಎಚ್ಚರಿಸಿದ್ದಾರೆ. 

ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಣ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾಜನ್ ವರದಿ ಕುರಿತು ಸುಪ್ರಿಂ ಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದೆ. ಈ ಹಂತದಲ್ಲಿ ಹೇಳಿಕೆ ನೀಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎನ್ನುವ ಕನಿಷ್ಠ ಪ್ರಜ್ಞೆಯೂ ಅವರಿಗೆ ಇದ್ದಂತಿಲ್ಲ. 

ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಸಾಂಗ್ಲಿ ಹೀಗೆ ಮಹಾರಾಷ್ಟ್ರದ 18 ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡಿಗರೇ ನಿರ್ಣಾಯಕರು. ಹಾಗಂತ ಕನ್ನಡಿಗರು ಈ ಪ್ರದೇಶದ ಮೇಲೆ ಹಕ್ಕುಸಾಧಿಸಲು ಪ್ರಯತ್ನ ನಡೆಸಿಲ್ಲ. ಆದರೆ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ರಾಜಕೀಯ ಉದ್ದೇಶಕ್ಕಾಗಿ ಇಂತಹ ಹೇಳಿಕೆ ನೀಡುವ ಮೂಲಕ ಗೊಂದಲ ಹುಟ್ಟುಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ರಾಜ್ಯದಲ್ಲಿನ ಮರಾಠಿಗರಲ್ಲಿ ಭರವಸೆ ಮೂಡಿಸುತ್ತಿದೆ. ಮರಾಠಿಗರು ಹಾಗೂ ಕನ್ನಡಿಗರು ಅನ್ಯೋನ್ಯವಾಗಿರುವ ಸಂದರ್ಭದಲ್ಲಿ ಇಂತಹ ಕುತಂತ್ರದ ಹೇಳಿಕೆಗಳಿಗೆ ಬೆಲೆ ಬರಲಾರದು ಅವರನ್ನೂ ಎಂದು ಶ್ರೀಮತಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.